Site icon Harithalekhani

ವಿದ್ಯಾರ್ಥಿಗಳಿಗೆ ಸ್ಪಷ್ಟ ಗುರಿಯಿರಬೇಕು: ಬಿ.ಸಿ.ಪಾಟೀಲ್

ಹಾವೇರಿ: “ನಾನು ಸಾಧಿಸಿಯೇ ಸಾಧಿಸುತ್ತೇನೆ. ಗುರಿಯನ್ನು ಮುಟ್ಟಿಯೇ ಮುಟ್ಟುತ್ತೇನೆ” ಎನ್ನುವ ಮನೋಭಾವ ಮಕ್ಕಳಲ್ಲಿ ವಿದ್ಯಾರ್ಥಿ ದಿನಗಳಿಂದಲೇ ಮೂಡಿಸಿಕೊಳ್ಳಬೇಕು.  ವಿದ್ಯಾರ್ಥಿಗಳಿಗೆ ಮುಂದಿನ ಗುರಿ ಸ್ಪಷ್ಟವಾಗಿರಬೇಕು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿಗಳೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಕರೆ ನೀಡಿದರು.

ಹಿರೆಕೆರೂರು ತಾಲೂಕಿನ ಬಾಳೆಂಬೆಡ,  ಕೌರವ ಶಿಕ್ಷಣ ಸಂಸ್ಥೆಯಲ್ಲಿ ಹಿರೆಕೆರೂರು, ರಟ್ಟಿಹಳ್ಳಿ ತಾಲೂಕುಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಪಡೆದ 17 ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಅವರು ಮಾತನಾಡಿದರು.

ಮಕ್ಕಳ ಮುಂದಿನ ಭವಿಷ್ಯ ವಿದ್ಯಾರ್ಥಿ ಬದುಕಿನಲ್ಲಿಯೇ ಅಡಗಿದ್ದು, ಸಾಧಿಸುವ ಛಲದೆಡೆಗೆ ಮಕ್ಕಳ ಗುರಿಯಿರಬೇಕು. ದೃಢ ನಿರ್ಧಾರದಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ.ಮೊಬೈಲ್, ಕಂಪ್ಯೂಟರ್ ಸೇರಿದಂತೆ ಮಕ್ಕಳು ತಮ್ಮ ಶಿಕ್ಷಣಕ್ಕೆ ಬೇಕಾದ ಮಾಹಿತಿಗಳನ್ನು ಪಠ್ಯಕ್ಕೆ ಪೂರಕವಾಗುವಂತೆ ತಂತ್ರಜ್ಞಾನಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಸಾಧಿಸಲು ಪ್ರಸಕ್ತ ದಿನಗಳಲ್ಲಿ ಹಲವಾರು ಮಾರ್ಗಗಳಿವೆ. ವಿದ್ಯಾರ್ಥಿಗಳಿಂದ ಸಾಧ್ಯವಿಲ್ಲ ಎನ್ನುವುದೂ ಏನೂ ಇಲ್ಲ. ಗುರಿ ಸಾಧಿಸುವ ಕಡೆಗೆ ಗಮನ, ಕಷ್ಟನಷ್ಟಗಳನ್ನು ಎದುರಿಸಿ ನಿಲ್ಲುವ ಆತ್ಮಸ್ಥೈರ್ಯವೇ ವಿದ್ಯಾರ್ಥಿಗಳಿಗೆ ಆಧಾರವಾಗಬೇಕು ಎಂದು ಪ್ರೇರಣೆ ನೀಡಿದರು.

ಈ ಸಂದರ್ಭದಲ್ಲಿ ಶಿಕ್ಷಣಾಧಿಕಾರಿ  ಸಿದ್ದಲಿಂಗಪ್ಪ, ಸಿಆರ್ ಪಿ ಜಗದೀಶ್, ಕೌರವ ಶಿಕ್ಷಣ ಸಂಸ್ಥೆ ಮುಖ್ಯಸ್ಥೆ ಸೃಷ್ಟಿ ಪಾಟೀಲ್ ಉಪಸ್ಥಿತರಿದ್ದರು.

Exit mobile version