ದೊಡ್ಡಬಳ್ಳಾಪುರ : ವಿದ್ಯಾರ್ಥಿಗಳು ತಮ್ಮ ಪ್ರೌಢ ಶಿಕ್ಷಣದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಾದ ಯೂಪಿಎಸ್ಸಿ, ಕೆಪಿಎಸ್ಸಿಗೆ ತಯಾರಿ ಅಗತ್ಯವಾಗಿದ್ದು, ದೊಡ್ಡಬಳ್ಳಾಪುರದಲ್ಲಿ ವಿವೇಕ್ ವಿಷನ್ ಕ್ಲಾಸಸ್ ಪ್ರಯತ್ನ ಸ್ವಾಗತಾರ್ಹ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಸಿ.ಎಸ್.ಕರೀಗೌಡ ಹೇಳಿದರು.
ನಗರದ ಹೇಮಾವತಿಪೇಟೆಯಲ್ಲಿನ ವಿವೇಕ್ ವಿಷನ್ ಕ್ಲಾಸಸ್‍ನಲ್ಲಿ ಭಾನುವಾರ ಸರಕಾರಿ ಶಾಲಾವಿದ್ಯಾರ್ಥಿಗಳ ಪ್ರತಿಭಾಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿನ ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಯಾವುದೇ ಕೀಳರಿಮೆಯಿಲ್ಲದೆ, ಸಿಗುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಆ ಮೂಲಕ ಭವಿಷ್ಯದಲ್ಲಿ ಅತ್ಯುನ್ನತ ಹುದ್ದೆಗಳನ್ನಲಂಕರಿಸುವ ಬೃಹತ್ ಕನಸುಗಳನ್ನು ಕಾಣಬೇಕು. ವಿದ್ಯಾರ್ಥಿ ವಯಸ್ಸಿನಲ್ಲಿ ಯಾವುದೇ ವ್ಯಾಮೋಹಗಳಿಗೆ ಒಳಗಾಗದೆ, ಸದೃಢವಾದ ಭವಿಷ್ಯ ನಿರ್ಮಿಸಿಕೊಳ್ಳಲು ಪ್ರಯತ್ನಿಸಬೇಕು. ಕನಸುಗಳ ಸಾಕಾರಕ್ಕೆ ಅಗತ್ಯ ಬೀಳುವ ಪರಿಶ್ರಮವನ್ನು ನಂಬಿ ಮುನ್ನಡೆದರೆ ಯಶಸ್ಸು ಸಿಗುವುದು ಖಚಿತ. ಅತಿಮುಖ್ಯವಾಗಿ ವಿದ್ಯಾರ್ಥಿಗಳು ಸರಳತೆಯನ್ನು ಮೈಗೂಡಿಸಿಕೊಳ್ಳಬೇಕು. ಜೀವನದ ಸಾಧನೆಗಳಿಗೆ ಸುತ್ತಲಿನ ಪರಿಸರ ಹೆಚ್ಚಿನ ಪರಿಣಾಮ ಬೀರುತ್ತದೆ ಎಂದರು.
ವಿವೇಕ್ ವಿಷನ್ ಕ್ಲಾಸಸ್‍ನ ವ್ಯವಸ್ಥಾಪಕ ನಿರ್ದೇಶಕ ಎ.ನಾಗರಾಜ್ ಮಾತನಾಡಿ, ಕಳೆದ ವರ್ಷ ದೊಡ್ಡಬಳ್ಳಾಪುರ ನಗರದ ಅರಳುಮಲ್ಲಿಗೆ ಬಾಗಿಲು ಸರಕಾರಿ ಶಾಲೆ, ಬಾಶೆಟ್ಟಿಹಳ್ಳಿ ಸರಕಾರಿ ಶಾಲೆ, ಸರಕಾರಿ ಜ್ಯೂನಿಯರ್ ಪ್ರೌಢ ಶಾಲೆ ಹಾಗೂ ಶ್ರೀಕೊಂಗಾಡಿಯಪ್ಪ ಪ್ರೌಢ ಶಾಲೆಯಲ್ಲಿ 50ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಟಾರ್ಗೆಟ್-625 ಹೆಸರಿನಡಿ ಪರೀಕ್ಷೆಗಳನ್ನು ನೀಡಲಾಗಿತ್ತು. ಅನಂತರ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಮತ್ತು ಭವಿಷ್ಯದ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತಾದ ಸಾಕಷ್ಟು ಮಾಹಿತಿಗಳನ್ನು ನೀಡಲಾಗಿತ್ತು. ಈ ವಿದ್ಯಾರ್ಥಿಗಳಲ್ಲಿ 25ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 2020-21ನೇ ಶೈಕ್ಷಣಿಕ ವರ್ಷದಲ್ಲು ಸರಕಾರಿ ಶಾಲೆಯ 30ವಿದ್ಯಾರ್ಥಿಗಳಿಗೆ ಸೂಪರ್-30 ಯೋಜನೆಯಡಿ ಉಚಿತ ಶಿಕ್ಷಣ ನೀಡಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪರಿಸರ ಸಿರಿ ತಂಡದ ರಾಜಶೇಖರ್, ಮಾಜಿ ಕಸಾಪ ಅಧ್ಯಕ್ಷ ಶ್ರೀಕಾಂತ್, ವಿವೇಕ್ ವಿಷನ್ ಕ್ಲಾಸಸ್ ಸಂಸ್ಥೆಯ ಶಿಕ್ಷಕರಾದ ಅನಿಲ್, ಆದರ್ಶ್, ಲಕ್ಷ್ಮಿಶ್ರೀನಿವಾಸ್, ಲತಾ, ರಘುವರ್ಧನ್‍ರಾವ್, ಯಶ್ವಂತ್ ಸೇರಿದಂತೆ ಇತರರು ಹಾಜರಿದ್ದರು.