ದೊಡ್ಡಬಳ್ಳಾಪುರ: ಸೆಪ್ಟಂಬರ್ 7 ರಿಂದ 18 ರವರೆಗೆ ನಡೆಯಲಿರುವ ಜಿಲ್ಲೆಯ ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿರುವ ದ್ವಿತೀಯ ಪಿ.ಯು.ಸಿ. ಪೂರಕ ಪರೀಕ್ಷೆಗೆ, ಜಿಲ್ಲೆಯ 2500 ವಿದ್ಯಾರ್ಥಿಗಳು ಹಾಜರಾಗಲಿದ್ದು, ಪರೀಕ್ಷೆಯು ಸುಸೂತ್ರವಾಗಿ ನಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಬೆಂಗಳೂರು ಗ್ರಾಮಾಂತರ ಅಪರ ಜಿಲ್ಲಾಧಿಕಾರಿ ಡಾ:ಜಗದೀಶ್.ಕೆ.ನಾಯಕ್ ಅವರು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ದೇವನಹಳ್ಳಿ ತಾಲ್ಲೂಕು, ಬೀರಸಂದ್ರ ಗ್ರಾಮದ, ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ನ್ಯಾಯಾಲಯ ಸಭಾಂಗಣದಲ್ಲಿಂದು ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ನಡೆದ, “2019-20ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯನ್ನು ವ್ಯವ್ಯಸ್ಥಿತವಾಗಿ ನಡೆಸಲು ಪೂರ್ವಸಿದ್ಧತಾ ಸಭೆ”ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊರೋನಾ ವೈರಾಣು ಸೋಂಕು ಭೀತಿ ಹಿನ್ನಲೆ, ಪರೀಕ್ಷೆಗೆ ಹಾಜರಾಗುವ ಮಕ್ಕಳ ಆರೋಗ್ಯ ಸುರಕ್ಷತಾ ದೃಷ್ಟಿಯಿಂದ ಪರೀಕ್ಷೆ ನಡೆಯಲಿರುವ ಜಿಲ್ಲೆಯ 4 ಪರೀಕ್ಷಾ ಕೇಂದ್ರಗಳ ಎಲ್ಲಾ ಕೊಠಡಿಗಳನ್ನು ಹಾಗೂ ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ ಆವರಣವನ್ನು ಸ್ಯಾನಿಟೈಜ್ ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ದ್ವೀತಿಯ ಪಿ.ಯು.ಸಿ. ಪೂರಕ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಮಾಸ್ಕ್ಗಳನ್ನು ನೀಡಬೇಕು. ಪ್ರತಿ ವಿದ್ಯಾರ್ಥಿಗಳಿಗೆ ಸ್ಯಾನಿಟೈಜ್ ನೀಡಿ ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ನಡೆಸಿ ನಂತರ ಪರೀಕ್ಷಾ ಕೊಠಡಿಗೆ ಪ್ರವೇಶಿಸಲು ಅವಕಾಶ ಕಲ್ಪಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ದ್ವೀತಿಯ ಪಿ.ಯು.ಸಿ. ಪೂರಕ ಪರೀಕ್ಷೆ ನಡೆಯಲಿರುವ ಒಟ್ಟು 4 ಪರೀಕ್ಷಾ ಕೇಂದ್ರಗಳ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಹೊರಡಿಸಲಾಗುವುದು. ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿಯೊಳಗೆ ವಿದ್ಯಾರ್ಥಿಗಳ ಪಾಲಕರೂ ಪ್ರವೇಶಿಸುವಂತಿಲ್ಲ ಎಂದರು.
ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಗಳನ್ನು ಪ್ರವೇಶಿಸುವಾಗ ಹಾಗೂ ಮರಳಿ ಹೋಗುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳವಂತೆ ಶಿಕ್ಷಕರು ನಿಗಾವಹಿಸಬೇಕು, ಅಲ್ಲದೆ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳು ಉತ್ತಮವಾಗಿರುವಂತೆ ಕ್ರಮ ವಹಿಸಲು ತಿಳಿಸಿದರು.
ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವತಿಯಿಂದ 4 ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಪೊಲೀಸ್ ಬಂದೋಬಸ್ತ್ನೊದಿಂಗೆ ಪರೀಕ್ಷಾ ಕಾರ್ಯಗಳಿಗೆ ವಾಹನ ಸೌಕರ್ಯ ಕಲ್ಪಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.