Site icon Harithalekhani

ರಾಯಣ್ಣನ ಪ್ರತಿಮೆ ಸ್ಥಾಪನೆಗೆ ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿಲ್ಲ: ಹೆಚ್‌.ಡಿ.ಕುಮಾರಸ್ವಾಮಿ

ಬೆಂಗಳೂರು: ಬೆಳಗಾವಿ ಜಿಲ್ಲೆ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಟಾಪನೆಗೆ ವಿರೋಧಿಸಿ ಮರಾಠೀ ಭಾಷಿಗರು  ದಾಂಧಲೆ ನಡೆಸಿದ್ದು ಅಕ್ಷಮ್ಯ.ನಮ್ಮ ನೆಲದಲ್ಲಿ ಅಪ್ರತಿಮ ಹೋರಾಟಗಾರ ರಾಯಣ್ಣನ ಪ್ರತಿಮೆ ಸ್ಥಾಪನೆಗೆ ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿಲ್ಲವೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ ರಾಯಣ್ಣ ಪ್ರತಿಮೆ ಸ್ಥಾಪನೆ ವಿಚಾರವಾಗಿ ನಡೆದಿರುವ ದಾಂಧಲೆ ಹಿನ್ನೆಲೆ ಟ್ವಿಟ್ ಮಾಡಿ ಪ್ರತಿಕ್ರಿಯೆ ನೀಡಿರುವ ಅವರು. ಎಂಇಎಸ್, ಶಿವಸೇನೆ ಅಥವಾ ಮತ್ಯಾರೇ ಆಗಲಿ ನಮ್ಮ ನಾಡಿನ ಹೆಮ್ಮೆಯ ವೀರಪುತ್ರ ಸಂಗೊಳ್ಳಿ ರಾಯಣ್ಣನಿಗೆ ಅಪಮಾನ ಮಾಡಿದರೆ ಕನ್ನಡಿಗರ ಸಹನೆ ಪರೀಕ್ಷಿಸಿದಂತೆ. ಇಂತಹ ಉದ್ಧಟತನಗಳನ್ನು ಕನ್ನಡಿಗರು ಸಹಿಸುವುದಿಲ್ಲ ಎಂದು ಎಚ್ಚರಿಸುವೆ.ಸಂಗೊಳ್ಳಿ ರಾಯಣ್ಣ  ನಮ್ಮ ನಾಡಿನ ಹೆಮ್ಮೆ. ಅವರ ಪ್ರತಿಮೆ ಸ್ಥಾಪನೆಗೆ ವಿರೋಧಿಸುವುದು ಕನ್ನಡಿಗರ ಕೆಚ್ಚೆದೆಯ ಸ್ವಾಭಿಮಾನ ಕೆಣಕಿದಂತೆ. ನಾಡಿನ ವೀರಪುತ್ರ ಮತ್ತು ವನಿತೆಯರ ವಿರುದ್ಧ ನಮ್ಮ ನೆಲದಲ್ಲಿ ತಗಾದೆ ತೆಗೆದರೆ ತಕ್ಕಪಾಠ ಕಲಿಸಬೇಕಾಗುತ್ತದೆ.

ನಮ್ಮ ನಾಡಿನ ನೆಲ-ಜಲ, ಭಾಷೆ ಮತ್ತು ಗಡಿ ವಿಷಯದಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ. ಈ ನೆಲದ ಅಸ್ಮಿತೆಗೆ ಭಂಗ ತರುವವರನ್ನು ಹೆಡೆಮುರಿ ಕಟ್ಟುವುದು ಸ್ವಾಭಿಮಾನಿ ಕನ್ನಡಿಗರ ರಕ್ತದಲ್ಲೇ ಇದೆ.

ಕನ್ನಡಿಗರೆಂದರೆ -ಸಾಧುಂಗೆ  ಸಾಧು, ಮಾಧುರ್ಯಂಗೆ ಮಾಧುರ್ಯನ್,  ಬಾದಿಪ್ಪ ಕಲಿಗೆ ಕಲಿಯುಗ ವಿಪರೀತನ್ ಎಂದು ಬಾದಾಮಿಯ ಕಪ್ಪೆ ಅರಭಟ್ಟನ ಶಾಸನದ ಬರಹವನ್ನು ಉಲ್ಲೇಖಿಸಿದ್ದಾರೆ.

Exit mobile version