Site icon Harithalekhani

ಬೆಂ.ಗ್ರಾ.ಜಿಲ್ಲೆ: ಲಸಿಕೆ ಸಾಪ್ತಾಹ ಕಾರ್ಯಕ್ರಮ ರೂಪಿಸಲು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸೂಚನೆ

ದೊಡ್ಡಬಳ್ಳಾಪುರ: ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಲಸಿಕೆ ಸಪ್ತಾಹ ಕೈಗೊಳ್ಳುವ ಮೂಲಕ ಲಸಿಕೆಯಿಂದ ಹೊರತಾದ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ಕೆ ಮುಂದಾಗಬೇಕೆಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸೂಚಿಸಿದರು. 

ದೇವನಹಳ್ಳಿ ತಾಲ್ಲೂಕು ಬೀರಸಂದ್ರ ಗ್ರಾಮದ ಬಳಿಯಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ನಡೆದ ಜಿಲ್ಲಾ ಮಟ್ಟದ ಲಸಿಕಾ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಲಸಿಕಾ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸಲು ಹಾಗೂ ಜಿಲ್ಲೆಯ ಮಕ್ಕಳ  ಆರೋಗ್ಯ ಸ್ಥಿತಿ ಉತ್ತಮವಾಗಿ ಕಾಪಾಡಿಕೊಳ್ಳಲು, ಆರೋಗ್ಯ ಕಾರ್ಯಕರ್ತರು ಹಾಗೂ ತಾಲ್ಲೂಕಿನ ವೈದ್ಯಾಧಿಕಾರಿಗಳನ್ನು ಒಳಗೊಂಡ ಜಿಲ್ಲಾ ಹಾಗೂ ತಾಲ್ಲೂಕು ಲಸಿಕಾ ಕಾರ್ಯ ಪಡೆಯು ಕಾರ್ಯೋನ್ಮುಖವಾಗಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ತಾಯಿಯ ಮರಣ ಪ್ರಮಾಣ ಹಾಗೂ ಶಿಶುವಿನ ಮರಣ ಪ್ರಮಾಣವನ್ನು ನಿಂಯತ್ರಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ  ಕಲ್ಯಾಣ ಅಭಿವೃದ್ದಿ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು, ಗರ್ಭಿಣಿ ಮಹಿಳೆಯರಿಗೆ ರಕ್ತಹೀನತೆ  ತಡೆಗೆ ಮುಂಜಾಗ್ರತೆ ವಹಿಸಿ  ಕಬ್ಬಿಣಾಂಶದ ಮಾತ್ರೆಗಳನ್ನು‌ ಕೊಡುವುದರಿಂದ ತಾಯಿ ಮರಣ ಪ್ರಮಾಣ ಶಿಶು ಮರಣ ಪ್ರಮಾಣ ತಡೆಯಲು ಸಹಕಾರಿಯಾಗಿದೆ ಎಂದರು.

ಸಾರ್ವಜನಿಕರಲ್ಲಿ ಆರೋಗ್ಯ ಶಿಕ್ಷಣದ ಬಗ್ಗೆ ಮಾಹಿತಿ ನೀಡುವ ಮೂಲಕ ಹೆಚ್ಚು ಜಾಗೃತಿ  ಮೂಡಿಸಿ, ಸಾರ್ವಜನಿಕರ ಆರೋಗ್ಯದ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು. 

ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುಳಾದೇವಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದೇಶಕ ಗಂಗಮಾರೇಗೌಡ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಆರೋಗ್ಯಾಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

Exit mobile version