ದೊಡ್ಡಬಳ್ಳಾಪುರ: ದೌರ್ಜನ್ಯಕ್ಕೊಳಗಾದವರಿಗೆ ತ್ವರಿತ ಪರಿಹಾರದ ಜೊತೆಗೆ ಗೌರವಯುತವಾಗಿ ಜೀವನ ನಡೆಸಲು ಅಧಿಕಾರಿಗಳು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2020 ನೇ ತ್ರೈಮಾಸಿಕ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರಿಶಿಷ್ಟ ಜನಾಂಗದವರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಕಡ್ಡಾಯವಾಗಿ ಶಿಕ್ಷೆಯಾಗಬೇಕು. ಇದಕ್ಕೆ ಪೂರಕವಾದ ಕ್ರಮವನ್ನು ಅಧಿಕಾರಿಗಳು ವಿಳಂಬ ಮಾಡದೆ ಕೈಗೊಳ್ಳಬೇಕು ಎಂದು ತಿಳಿಸಿದರು.
ಸರಕಾರಿ ಜಮೀನು ಲಭ್ಯವಿಲ್ಲದ ಗ್ರಾಮಗಳಲ್ಲಿ ಖಾಸಗಿ ಜಮೀನುಗಳನ್ನು ಖರೀದಿಸಿ ಸ್ಮಶಾನಕ್ಕೆ ಕಾಯ್ದಿರಿಸಲಾಗಿದೆ. ಒತ್ತುವರಿ ಮಾಡಿಕೊಳ್ಳಲಾಗಿರುವ ಸ್ಮಶಾನ ಜಾಗವನ್ನು ತೆರವುಗೊಳಿಸಬೇಕು. ಸ್ಮಶಾನ ಭೂಮಿ ಲಭ್ಯವಿಲ್ಲದ ಜಿಲ್ಲೆಯ ನಾಲ್ಕೂ ತಾಲ್ಲೂಕುಗಳ ಪೈಕಿ ಈಗಾಗಲೇ ಹಲವು ಕಡೆ ಅಂತ್ಯಸಂಸ್ಕಾರಕ್ಕಾಗಿ ಸ್ಮಶಾನ ಭೂಮಿ ಕಲ್ಪಿಸಿಕೊಡಲಾಗಿದೆ ಎಂದು ಹೇಳಿದರು.
ಸಾರ್ವಜನಿಕರೊಡನೆ ಗೌರವ ಯುತವಾಗಿ ನಡೆದುಕೊಳ್ಳುವುದು ಸರ್ಕಾರಿ ಅಧಿಕಾರಿಗಳ ಕರ್ತವ್ಯವಾಗಿದೆ. ಸ್ಥಳೀಯ ಮಟ್ಟದಲ್ಲೇ ಸಾರ್ವಜನಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಮೂಲಕ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಿಬೇಕು ಎಂದು ತಿಳಿಸಿದರು.
ಇದೇ ವೇಳೆ ಜಿಲ್ಲೆಯಲ್ಲಿ ನಡೆದಿರುವ 32 ದೌರ್ಜನ್ಯ ಪ್ರಕರಣಗಳ ಪೈಕಿ, 28 ಪ್ರಕರಣಗಳಿಗೆ ರೂ. 31,93,626 ಪರಿಹಾರ ಧನವನ್ನು ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಹನುಮಂತರಾಯಪ್ಪ ಅವರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಜಗದೀಶ್.ಕೆ.ನಾಯಕ್, ಉಪವಿಭಾಗಾಧಿಕಾರಿ ಅರುಳ್ ಕುಮಾರ್, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.