ಚಿಕ್ಕಮಗಳೂರು: ಭಾರತೀಯ ಇತಿಹಾಸ ಪುರಾಣದಲ್ಲಿ ವಿಶೇಷ ಉದಾತ್ತ ಮೌಲ್ಯಗಳ ವ್ಯಕ್ತಿತ್ವ ಹೊಂದುವ ಮೂಲಕ ರಾಜನೀತಿ ನಿಪುಣನಾಗಿ ಧರ್ಮದ ಪರಿಪಾಲಕ ಶ್ರೀಕೃಷ್ಣ ನಮ್ಮೆಲ್ಲರಿಗೂ ಮಾದರಿ ಎಂದು ಪ್ರವಾಸೋದ್ಯಮ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಹೇಳಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಸರಳವಾಗಿ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಪುರಾಣದಲ್ಲಿ ವಿಶೇಷ ವ್ಯಕ್ತಿತ್ವ ಹೊಂದಿದ ವ್ಯಕ್ತಿಗಳಲ್ಲಿ ಶ್ರೀ ಕೃಷ್ಣ ಪರಮಾತ್ಮ ಕೂಡ ಒಬ್ಬರು ಜಾಗತಿಕವಾಗಿ ಸ್ನೇಹ -ಸೌಹಾರ್ದಯುತವಾದ ಉದಾತ್ತ ಮೌಲ್ಯ ಗುಣಗಳನ್ನು ಹೊಂದಿ ಶ್ರೇಷ್ಟ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ, ಯಾವುದೇ ಪದವಿಗೆ ವ್ಯಾಮೋಹ ಹೊಂದದೆ ಧರ್ಮದ ಪರಿಪಾಲಕನಾಗಿ ಮಹಾಭಾರತದಲ್ಲಿ ತನ್ನದೇ ಪಾತ್ರ ವಹಿಸಿ ಜನರ ಮನದಲ್ಲಿ ಉಳಿದ ಮಹಾನ್ ವ್ಯಕ್ತಿ ಎಂದರು.
ಮಹಾಭಾರತದಲ್ಲಿ ಶ್ರೀ ಕೃಷ್ಣನ ಜೀವನ ಚರಿತ್ರೆ ಅಧ್ಯಯನ ಮಾಡಿದಲ್ಲಿ ಆತನ ರಾಜನೀತಿ ಆಡಳಿತ, ಧರ್ಮದ ಪರವಾಗಿ ನಿಲ್ಲುವುದು ಸೇರಿದಂತೆ ಉತ್ತಮ ಮೌಲ್ಯಯುತ ಅಂಶಗಳು ನಮ್ಮೆಲ್ಲರಿಗೂ ಮಾದರಿಯಾಗಲಿದೆ, ರಾಜಸೂಯ ಯಾಗದಲ್ಲಿ ಶ್ರೀ ಕೃಷ್ಣನಿಗೆ ಅಗ್ರ ಪೂಜೆ ಆದರೂ ಯಾವುದೇ ಅಹಂ ಇಲ್ಲದೇ ನಿಷ್ಠೆ ತೋರಿದ ವ್ಯಕ್ತಿತ್ವ ಜೊತೆಗೆ ಯುದ್ಧದಲ್ಲಿ ಯಾವುದೇ ಶಸ್ತ್ರ ಹೊಂದದೇ ಪಾಂಡವರ ಪರ ಧೂತನಾಗಿ ಕೌರವರ ಮನವೊಲಿಸುವ ಕಾರ್ಯ ಮಾಡಿದವನು ದ್ರೌಪದಿಯ ವಸ್ತ್ರಾಪಹರಣವಾಗಿ ಸಂಕಷ್ಟದಲ್ಲಿದ್ದಾಗ ಆಕೆಯ ಸಹಾಯಕ್ಕೆ ಬಂದವನು ಪೌರಾಣಿಕ ಅತ್ಯುತ್ತಮ ಮೌಲ್ಯ ಹೊಂದಿದ ವ್ಯಕ್ತಿಯಾಗಿ ಶ್ರೀ ಕೃಷ್ಣ ಪರಮಾತ್ಮ ಗುರ್ತಿಸಿಕೊಂಡಿದ್ದಾನೆ ಎಂದರು.
ರಾಮಾಯಣ ಮತ್ತು ಮಹಾಭಾರತ ಪೂರ್ವಿಕರು ನಾಡಿಗಾಗಿ ನೀಡಿರುವ ಉದಾತ್ತ ಮೌಲ್ಯಗಳ ಸಂಗ್ರಹವಾಗಿದೆ ಎಂದ ಅವರು ಶ್ರೀ ಕೃಷ್ಣ ಹಾಗೂ ಪುರಾಣದಲ್ಲಿರುವ ವಿಚಾರಧಾರೆಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ಎಂದಿಗೂ ಸೋಲಿಲ್ಲ ಧರ್ಮದ ಪರಿಪಾಲಕನಾಗಿ ಹೋರಾಡುವ ಆತನ ವ್ಯಕ್ತಿತ್ವ, ರಾಜನೀತಿ ಆಡಳಿತ ಇಂದಿನ ಸಮಾಜಕ್ಕೆ ಮಾದರಿಯಾಗಲಿದೆ ಧರ್ಮ ಎಂಬುದು ಕೇವಲ ಒಂದು ಮತವಲ್ಲ ಅದು ಎಲ್ಲರ ಒಳಿತನ್ನು ಬಯಸುವ ಉದಾರ ಮೌಲ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್.ಪೂವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಹೆಚ್. ಅಪರ ಜಿಲ್ಲಾಧಿಕಾರಿ ಡಾ.ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದೇಶಕ ಡಾ. ರಮೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.