Site icon Harithalekhani

ದೊಡ್ಡಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವೈವಿಧ್ಯ ವನ / 2005ನೇ ಸಾಲಿನ ಹಳೆಯ ವಿದ್ಯಾರ್ಥಿಗಳು,ಪರಿಸರ ಸ್ನೇಹ ಬಳಗ ಸಂಘಟನೆಯಡಿಯಲ್ಲಿ ವೈವಿಧ್ಯ ವನ

ದೊಡ್ಡಬಳ್ಳಾಪುರ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2005ನೇ ಸಾಲಿನ ಹಳೆಯ ವಿದ್ಯಾರ್ಥಿಗಳು,ಪರಿಸರ ಸ್ನೇಹ ಬಳಗ ಸಂಘಟನೆಯಡಿಯಲ್ಲಿ ಕಾಲೇಜಿಗೆ ಸೇರಿದ ಮೈದಾನದಲ್ಲಿ ವೈವಿಧ್ಯ ವನ ನಿರ್ಮಿಸಲು ಮುಂದಾಗಿದ್ದು,ಭಾನುವಾರ ಸಸಿಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಸಸಿ ನೆಡಲು ಚಾಲನೆ ನೀಡಿದ ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಎಸ್.ಪಿ.ರಾಜಣ್ಣ,ಶಾಲಾ ಕಾಲೇಜುಗಳಲ್ಲಿ ಕಲಿಯುವುದಕ್ಕಿಂತ ಹೆಚ್ಚಾಗಿ ಪರಿಸರದೊಡನೆ ಕಲಿಯುವ ಶಿಕ್ಷಣ ಹೆಚ್ಚು ಪ್ರಭಾವಶಾಲಿ.ಜೀವವೈವಿದ್ಯವನ್ನು ಕಾಪಾಡುವ ಹೊಣೆ ನಮ್ಮೆಲ್ಲರ ಮೇಲಿದೆ.ವಿದ್ಯಾರ್ಥಿಗಳು ಸರ್ವತೋಮುಖವಾಗಿ ಪ್ರಗತಿ ಹೊಂದಿದಾಗ ಮಾತ್ರ ಶಿಕ್ಷಣಕ್ಕೆ ಅರ್ಥ.ಈ ದಿಸೆಯಲ್ಲಿ ವಿದ್ಯಾರ್ಥಿಗಳು ಪರಿಸರದ ಬಗ್ಗೆ ಕಾಳಜಿ ವಹಿಸುತ್ತಿರುವುದು ಅಭಿನಂದನೀಯ ಎಂದರು.

ಕಾಲೇಜಿನ ಪ್ರಾಂಶುಪಾಲ ಎನ್.ಶ್ರೀನಿವಾಸಯ್ಯ ಮಾತನಾಡಿ,ಗ್ರಾಮೀಣ ವಿದ್ಯಾರ್ಥಿಗಳು ಹೆಚ್ಚಾಗಿರುವ ನಮ್ಮ ಕಾಲೇಜಿಗೆ ನ್ಯಾಕ್ ಬಿ ಮಾನ್ಯತೆ ದೊರೆತಿರುವುದು ಹೆಮ್ಮೆಯ ವಿಚಾರ. ಕಾಲೇಜಿನಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ವೈವಿಧ್ಯ ವನಕ್ಕೆ ಕಾಲೇಜಿನ ವಿದ್ಯಾರ್ಥಿಗಳಿಂದ ಸಹಕಾರ ಹಾಗೂ ನೆರವು ನೀಡಿ ಗಿಡಗಳನ್ನು ಪೋಷಿಸುವ ಹೊಣೆ ನೀಡಲಾಗುವುದು ಎಂದರು.

ವೈವಿಧ್ಯ ವನದ ಮಾಹಿತಿ ನೀಡಿದ ಪರಿಸರ ಸ್ನೇಹ ಬಳಗದ ವಸಂತ್ ಕುಮಾರ್, ಇಂದು ಕಾಲೇಜಿನ ಮೈದಾನದಲ್ಲಿ 48 ವಿವಿಧ ಜಾತಿಯ 95 ಸಸಿಗಳನ್ನು  ನೆಡಲಾಗಿದೆ. ಇದಕ್ಕೆ ಪೂರಕವಾಗಿ ಸಣ್ಣ ಕೃಷಿ ಹೊಂಡ ನಿರ್ಮಿಸಲಾಗಿದೆ. ನಾವು ವ್ಯಾಸಂಗ ಮಾಡಿರುವ ಕಾಲೇಜಿನಲ್ಲಿ ವಿಶಿಷ್ಟವಾಗಿ ಏನಾದರೂ ಮಾಡಬೇಕೆನ್ನುವ ಅಭಿಲಾಷೆಯಿಂದ ವೈವಿಧ್ಯ ವನ ನಿರ್ಮಿಸಲಾಗಿದ್ದು, ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಸ್.ಪಿ.ರಾಜಣ್ಣ ಅವರ ಮಾರ್ಗದರ್ಶನದಲ್ಲಿ ನಿರ್ವಹಣೆ ಮಾಡಿ ನಂತರ ತಾಲೂಕಿನ ವಿವಿದೆಡೆಗಳಲ್ಲಿ ನಿರ್ಮಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಸುಲೋಚನಮ್ಮ ವೆಂಕಟರೆಡ್ಡಿ,ಯುವ ಸಂಚಲನದ ಅಧ್ಯಕ್ಷ ಚಿದಾನಂದ್,ಪರಿಸರ ಸ್ನೇಹ ಬಳಗದ ವಿರೂಪಾಕ್ಷ,ಪ್ರವೀಣ್, ರೈತ ಸಂಘದ ತಾಲೂಕು ಅಧ್ಯಕ್ಷ ಹನುಮೇಗೌಡ,ಕಾಲೇಜಿನ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ಸೇರಿದಂತೆ ಪರಿಸರಾಸಕ್ತರು ಭಾಗವಹಿಸಿದ್ದರು.

Exit mobile version