ಬೆಂಗಳೂರು: ಕರೊನಾ ಸೋಂಕಿನ ಚಿಕಿತ್ಸೆಗೆ ಒಳಗಾಗಿದ್ದರು. ರಾಜ್ಯದಲ್ಲಿ ಮಳೆಯಿಂದ ಜನ ಜೀವ ಅಸ್ತವ್ಯಸ್ತವಾಗಿರುವ ಕುರಿತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಸ್ಪತ್ರೆಯಿಂದಲೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಳೆದರಡು ದಿನಗಳಿಂದ ರಾಜ್ಯಾದ್ಯಂತ ಸುರಿಯುತ್ತಿರುವ ಮಳೆ, ಏರುತ್ತಿರುವ ನೆರೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸಬೇಕಾಗಿರುವ ಸರ್ಕಾರ ಸಂಪೂರ್ಣ ಸ್ಥಗಿತಗೊಂಡಿದೆ. ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿದೆಯೇ ಎಂದು ಪ್ರಶ್ನಿಸಿರುವ ಅವರು.
ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಮಾತ್ರವಲ್ಲ, ಉತ್ತರ ಕರ್ನಾಟಕದಲ್ಲಿಯೂ ಮಳೆಯಿಂದಾಗಿ ಜನ ಪ್ರವಾಹದ ಭೀತಿಯಲ್ಲಿದ್ದಾರೆ. ರಾಜ್ಯ ಸರ್ಕಾರ ತಕ್ಷಣ ಕಾರ್ಯಪ್ರವೃತ್ತವಾಗಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಅವರಿಗೆ ಊಟ-ವಸತಿ ವ್ಯವಸ್ಥೆ ಕಲ್ಪಿಸಿ, ಅವರಲ್ಲಿ ಧೈರ್ಯ ತುಂಬುವ ಕೆಲಸ ಮಾಡಬೇಕು. ಆಸ್ಪತ್ರೆಯಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಕ್ಷಣ ಹಿರಿಯ ಸಹದ್ಯೋಗಿಗಳಿಗೆ ಜವಾಬ್ದಾರಿ ಹಂಚಿ ಅತಿವೃಷ್ಟಿಯ ಸಮಸ್ಯೆಗಳಿಗೆ ಪರಿಹಾರವನ್ನು ಕಲ್ಪಿಸಲು ವ್ಯವಸ್ಥೆ ಮಾಡಬೇಕು. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರನ್ನು ಸ್ಥಳಕ್ಕೆ ಕಳಿಸಿ ಪ್ರತ್ಯಕ್ಷದರ್ಶಿ ವರದಿಯನ್ನು ತರಿಸಿಕೊಳ್ಳಬೇಕು.
ರಾಜ್ಯದ ಕಂದಾಯ ಸಚಿವರೂ ಕ್ವಾರಂಟೈನ್‌ಗೊಳಗಾಗಿದ್ದಾರೆಂದು ಹೇಳಲಾಗುತ್ತಿದೆ.ಪ್ರವಾಹ ನಿಯಂತ್ರಣ ಮತ್ತು ಪರಿಹಾರ ಕಾರ್ಯದಲ್ಲಿ ಕಂದಾಯ ಇಲಾಖೆಯ ಜವಾಬ್ದಾರಿ ಹೆಚ್ಚಿರುವುದರಿಂದ ಪೂರಕ ವ್ಯವಸ್ಥೆ ಮಾಡುವ ಬಗ್ಗೆ ಮುಖ್ಯಮಂತ್ರಿ ಅವರು ಗಮನ ಹರಿಸಬೇಕು.
ಕಳೆದ ವರ್ಷದ ಆಗಸ್ಟ್-ಅಕ್ಟೋಬರ್ ತಿಂಗಳ ಪ್ರವಾಹದಿಂದ ಜನತೆ ಇನ್ನೂ ಚೇತರಿಸಿಕೊಂಡಿಲ್ಲ. ಹಳೆಯ ಹಾನಿಯ ಪರಿಹಾರ ಕಾರ್ಯವೇ ಇನ್ನೂ ಪೂರ್ಣಗೊಂಡಿಲ್ಲ. ನಿರಂತರವಾಗಿ ಈ ಬಗ್ಗೆ ನಾವು ಎಚ್ಚರಿಸುತ್ತಿದ್ದರೂ ಸರ್ಕಾರ ಸ್ಪಂದಿಸಿಲ್ಲ.
ರಾಜ್ಯ ಸರ್ಕಾರದ ಈ ನಿರ್ಲಕ್ಷಕ್ಕೆ ಅಮಾಯಕ ಜನ ಬಲಿಯಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.