ದೊಡ್ಡಬಳ್ಳಾಪುರ: ಲಯನ್ಸ್ ಕ್ಲಬ್,ಲಯನ್ಸ್ ಚಾರಿಟೀಸ್ ಟ್ರಸ್ಟ್ ವತಿಯಿಂದ ಹಾಗೂ ಸಾರ್ವಜನಿಕರ ಸಹಾಯದಿಂದ ಲಯನ್ಸ್ ಡಯಾಲಿಸಿಸ್ ಆಸ್ಪತ್ರೆಯನ್ನು ಆರಂಭಿಸಲಾಗಿದೆ. ಬಡವರಿಗೆ ಉಚಿತವಾಗಿ ಸೇವೆ ನೀಡುವ ಉದ್ದೇಶದಿಂದ ದೇಣಿಗೆ ಸಂಗ್ರಹ ಮಾಡಲಾಗುತ್ತಿದೆ ಎಂದು ಲಯನ್ಸ್ ಕ್ಲಬ್ಅಧ್ಯಕ್ಷ ಆರ್.ಎಸ್.ಮಂಜುನಾಥ್ ಹೇಳಿದರು.
ಅವರು ಡಯಾಲಿಸಿಸ್ ಆಸ್ಪತ್ರೆಗೆ ಸಾರ್ವಜನಿಕರಿಂದ ದೇಣಿಗೆ ಸ್ವೀಕಾರ ಸಭೆಯಲ್ಲಿ ಮಾತನಾಡಿದರು.
ಪ್ರತಿನಿತ್ಯ 18 ಜನರಿಗೆ ಕಡಿಮೆ ಶುಲ್ಕ ಪಡೆದು ಡಯಾಲಿಸಿಸ್ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಉದ್ದೇಶ ಹೊಂದಲಾಗಿದೆ. ಹೀಗಾಗಿ ಒಂದು ಕೋಟಿ ರೂಪಾಯಿ ದೇಣಿಗೆ ಸಂಗ್ರಹ ಮಾಡಿ ಇದರಿಂದ ಬರುವ ಮಾಸಿಕ ಬಡ್ಡಿ ಹಣವನ್ನು ಚಿಕಿತ್ಸೆಯ ವೆಚ್ಚ ಭರಿಸಲು ಬಳಸಿಕೊಳ್ಳಲಾಗುವುದು. ಈ ವರ್ಷದಲ್ಲಿ ₹25 ಲಕ್ಷ ಸಂಗ್ರಹ ಮಾಡುವ ಗುರಿ ಹೊಂದಲಾಗಿದೆ. ಈಗಾಗಲೆ ಸಾಕಷ್ಟು ಜನ ದೇಣಿಗೆ ನೀಡಿ ಲಯನ್ಸ್ ಕ್ಲಬ್ನ ಜನ ಸೇವಾ ಕೆಲಸವನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದರು.
ಲಯನ್ಸ್ ಕ್ಲಬ್ ಉಪಾಧ್ಯಕ್ಷ ಹುಲಿಕಲ್ ನಟರಾಜ್,ಕಾರ್ಯದರ್ಶಿ ಎಂ.ಆರ್.ಶ್ರೀನಿವಾಸ್,ಸಹ ಕಾರ್ಯದರ್ಶಿ ಮಂಗಳಗೌರಿ ಪರ್ವತಯ್ಯ ಇದ್ದರು.