ದೊಡ್ಡಬಳ್ಳಾಪುರ: ಗ್ರಾಮ ಪಂಚಾಯಿತಿ ಸದಸ್ಯರ ವಾರ್ಡ್ವಾರು ಮೀಸಲಾತಿ ಅಂತಿಮ ಪಟ್ಟಿಯನ್ನು ರಾಜ್ಯ ಚುನಾವಣ ಆಯೋಗ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಿದೆ. ಇದರಿಂದಾಗಿ ಆಕಾಂಕ್ಷಿಗಳು ತಮಗೆ ಬೇಕಾದ ಮೀಸಲಾತಿ ನಿಗದಿಪಡಿಸಿಕೊಳ್ಳಲು ನಡೆಸಲಾಗುತ್ತಿದ್ದ ಎಲ್ಲಾ ರೀತಿಯ ಕಸರತ್ತಿಗೆ ತೆರೆಬಿದ್ದಿದೆ.
ತಾಲ್ಲೂಕಿನ 29 ಗ್ರಾಮ ಪಂಚಾಯಿತಿಗಳ ಪೈಕಿ ಐದು ವರ್ಷಗಳ ಅವಧಿ ಮುಕ್ತಾಯವಾಗಿರುವ 26 ಗ್ರಾಮ ಪಂಚಾಯಿತಿಗಳಿಗೆ ಮಾತ್ರ ಈಗ ಚುನಾವಣೆ ನಡೆಯಬೇಕಿದೆ. ಆದರೆ ಮೀಸಲಾತಿ ಪಟ್ಟಿ ಮಾತ್ರ ಎಲ್ಲಾ 29 ಗ್ರಾಮ ಪಂಚಾಯಿತಿಗಳಿಗು ಪ್ರಕಟವಾಗಿದೆ.
ಈಗಾಗಲೇ ಅವಧಿ ಮುಕ್ತಾಯವಾಗಿರುವ ಗ್ರಾಮ ಪಂಚಾಯಿತಿಗಳಿಗೆ ಆಡಳಿತ ಅಧಿಕಾರಿಗಳ ನೇಮಕವಾಗಿದೆ. ತಾಲ್ಲೂಕು ಸೇರಿದಂತೆ ರಾಜ್ಯದಲ್ಲಿ ಹೆಚ್ಚಾಗಿರುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆಯನ್ನು ಗಮನಿಸಿದರೆ ಸದ್ಯಕ್ಕೆ ಗ್ರಾಮ ಪಂಚಾಯಿತಿಗಳ ಚುನಾವಣೆ ನಡೆಯುವ ಲಕ್ಷಗಳು ಕಾಣಿಸುತ್ತಿಲ್ಲ.
ಇಷ್ಟು ದಿನಗಳ ಕಾಲ ತಮಗೆ ಬೇಕಾದ ಮೀಸಲಾತಿ ನಿಗದಿಪಡಿಸಿಕೊಡುವಂತೆ ಶಾಸಕರ ಹಾಗೂ ರಾಜ್ಯದಲ್ಲಿನ ಆಡಳಿತ ಪಕ್ಷದ ಮುಖಂಡರ ಬೆನ್ನುಬಿದ್ದಿದ್ದ ಆಕಾಂಕ್ಷಿಗಳು ಈಗ ಪಕ್ಷದ ಟಿಕೇಟ್ ತಮಗೇ ನೀಡುವಂತೆ (ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಚಿಹ್ನೆ ಇಲ್ಲ. ಆದರೆ ಬೆಂಬಲಿತ ಅಭ್ಯರ್ಥಿ ಎಂದು ಕರಪತ್ರದಲ್ಲಿ ಹಾಕಿಕೊಳ್ಳಲಾಗುತ್ತದೆ) ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಹಿಂದೆ ಸುತ್ತುವುದು ಆರಂಭವಾಗಿದೆ. ಇದಲ್ಲದೆ ಕೊರೊನಾ ಸಂದರ್ಭದಲ್ಲೂ ಸಹ ಗ್ರಾಮ ಪಂಚಾಯಿತಿ ಸದಸ್ಯರಾಗುವ ಆಕಾಂಕ್ಷಿಗಳು ಕಿಟ್ ಹಂಚುವುದರಿಂದ ಮೊದಲುಗೊಂಡು ವಿವಿಧ ಜನಸೇವಾ ಕೆಲಸಗಳನ್ನು ಮಾಡಿದ್ದರು. ಅಧಿಕೃತವಾಗಿ ಮೀಸಲಾತಿ ಪಟ್ಟಿ ಪ್ರಕಟವಾದ ನಂತರ ತಾವು ಸ್ಪರ್ಧಿಸುವ ವಾರ್ಡ್ಗಳಲ್ಲಿ ಸಮಾಜ ಸೇವಾ ಕೆಲಸಗಳು ಮತ್ತಷ್ಟು ವೇಗಪಡೆದುಕೊಂಡಿವೆ.
ಗ್ರಾಮ ಪಂಚಾಯಿತಿ ಮೀಸಲಾತಿ ಪಟ್ಟಿ ವೀಕ್ಷಣೆಗೆ ವೆಬ್ಸೈಟ್ ವಿಳಾಸ https: // erajyapatra.karnataka.gov.in.