Site icon Harithalekhani

ದೊಡ್ಡಬಳ್ಳಾಪುರದಲ್ಲಿ ಗಾಳಿಪಟದ ದಾರಕ್ಕೆ ಸಿಲುಕಿದ್ದ ಹದ್ದು ರಕ್ಷಣೆ / ಮತ್ತೆ ಹಾರಾಟ ಮಾಡುವಂತೆ ಮಾಡಿದ ಪಕ್ಷಿ ಪ್ರಿಯರು

ದೊಡ್ಡಬಳ್ಳಾಪುರ: ಗಾಳಿಪಟದ ದಾರಕ್ಕೆ ಸಿಲುಕಿ ಪ್ರಾಣ ಉಳಿಸಿಕೊಳ್ಳಲು ಒದ್ದಾಡುತ್ತಿದ್ದ ಹದ್ದನ್ನುಸೋಮವಾರ ಬೆಳಿಗ್ಗೆ ಪಕ್ಷಿ ಪ್ರಿಯರು ರಕ್ಷಣೆ ಮಾಡಿ ಮತ್ತೆ ಹಾರಾಟ ಮಾಡುವಂತೆ ಮಾಡಿದರು.

ಗಾಳಿಪಟ ಹಾರಾಟ ಮಾಡುವಾಗ ಸೂತ್ರ ಹರಿದ ಗಾಳಿಪಟವೊಂದು ದಾರದೊಂದಿಗೆ ಹಾರಿ ಬಂದು ಶಾಂತಿನಗರದ 1ನೇ ಕ್ರಾಸ್‌ನಲ್ಲಿನ ತೆಂಗಿನ ಮರಕ್ಕೆ ಸುತ್ತಿಕೊಂಡಿದೆ. ಆಹಾರ ಹುಡುಕುತ್ತ ಇದೇ ಮಾರ್ಗವಾಗಿ ಬಂದಿರುವ ಹದ್ದಿನ ರೆಕ್ಕೆಯೊಂದಕ್ಕೆ ಗಾಳಿಪಟದ ಸಣ್ಣದಾದ ಬಿಳಿ ದಾರ ಸುತ್ತಿಕೊಂಡಿದೆ. ರೆಕ್ಕೆ ಸಿಕ್ಕಿಕೊಳ್ಳುತ್ತಿದ್ದಂತೆ ಸಾಕಷ್ಟು ಒದ್ದಾಟ ನಡೆಸಿರುವ ಹದ್ದು ಬಿಡಿಸಿಕೊಳ್ಳಲು ಹರಸಾಹಸವನ್ನೇ ಮಾಡಿದೆ. ಆದರೆ ಗಾಳಿಪಟಕ್ಕೆ ಕಟ್ಟಲಾಗಿದ್ದ ಪ್ಲಾಸ್ಟಿಕ್‌ ದಾರ ಹೆಚ್ಚು ಬಲಶಾಲಿಯಾಗಿದ್ದರಿಂದ ಇಡೀ ರಾತ್ರಿ ಪ್ರಯತ್ನಿಸಿದ್ದರು ಸಾಧ್ಯವಾಗಿಲ್ಲ ಎಂದು ವಿವರಿಸಿದರು ಸ್ಥಳೀಯ ನಿವಾಸಿ ಅಮರ್‌.

ಪಕ್ಷಿಗಳ ಪೈಕಿ ಹದ್ದು ದೈಹಿಕವಾಗಿ ಒಂದಿಷ್ಟು ಬಲಶಾಲಿ. ಹೀಗಾಗಿ ಪ್ಲಾಸ್ಟಿಕ್‌ ದಾರಕ್ಕೆ ಸಿಕ್ಕಿ ಒದ್ದಾಡಿದ್ದರು ಸಹ ರೆಕ್ಕೆಗೆ ಯಾವುದೇ ರೀತಿಯಿಂದಲು ಹಾನಿಯಾಗಿರಲಿಲ್ಲ ಹಾಗೂ ದೈಹಿಕವಾಗಿಯು ನಿತ್ರಾಣವಾಗಿರಲಿಲ್ಲ ಎಂದು ಹೇಳಿದ ಪಕ್ಷಿಗಳ ಛಾಯಾಚಿತ್ರಗ್ರಾಹಕ ಚಿದಾನಂದ್‌, ಸ್ಥಳೀಯೊರೊಬ್ಬರು ಹದ್ದು  ತೆಂಗಿನಮರದಲ್ಲಿನ ಗಾಳಿಪಟದ ದಾರಕ್ಕೆ ಸಿಕ್ಕಿಹಾಕಿಕೊಂಡಿರುವ ಮಾಹಿತಿ ನೀಡುತ್ತಿದ್ದಂತೆ ಸ್ನೇಹಿತರೊಂದಿಗೆ ಬಂದು ತೆಂಗಿನ ಮರದ ಸಮೀಪದಲ್ಲೇ ಇದ್ದ ಮಾವಿನ ಮರವನ್ನು ಹತ್ತಿಕೊಂಡು ಹೋಗಿ ಉದ್ದನೆಯ ಕಡ್ಡಿಗೆ ಹರಿತವಾದ ಕುಡುಗೋಲು ಕಟ್ಟಿಕೊಂಡು ಹದ್ದಿನ ರೆಕ್ಕೆಗಳಿಗೆ ಹಾನಿಯಾಗದಂತೆ ದಾರವನ್ನು ಕತ್ತರಿಸಲಾಯಿತು. ಒಂದಿಷ್ಟು ದಾರಗಳು ಕತ್ತರಿಸುತ್ತಿದ್ದಂತೆ ಹದ್ದು ಕೆಳಗೆ ಬೀಳದೆ ಹಾರಿಕೊಂಡು ಹೋಯಿತು ಎಂದು ದಾರಕ್ಕೆ ಸಿಲುಕಿಕೊಂಡಿದ್ದ ಹದ್ದನ್ನು ರಕ್ಷಣೆ ಮಾಡಿದನ್ನು ವಿವರಿಸಿದರು.

ಜಾನಪದ ಆಟವು ಆಗಿರುವ ಗಾಳಿಪಟ ಹಾರಾಟ ನಡೆಸಲು ನಗರದ ಅಂಚಿನಲ್ಲಿ ಪ್ರತ್ಯೇಕವಾದ ಮೈದಾನವನ್ನು ಗುರುತಿಸಲಾಗಿದೆ. ಇಲ್ಲಿ ಪ್ರತಿ ವರ್ಷವು ಗಾಳಿಟ ಹಾರಿಸುವ ಸ್ಪರ್ಧೆಗಳು ನಡೆಯುತ್ತವೆ. ಆದರೆ ಕೆಲವರು ತಿಳುವಳಿಕೆ ಕೊರತೆಯಿಂದಾಗಿ ನಗರದಲ್ಲಿನ ಮನೆಗಳ ಮಹಡಿ ಮೇಲೆ ನಿಂತು ಗಾಳಿಪಟ ಹಾರಿಸುತ್ತಾರೆ. ಇದರಿಂದಾಗಿ ಪಕ್ಷಿಗಳಿಗಷ್ಟೇ ತೊಂದರೆಯಾಗುವುದಿಲ್ಲ, ವಿದ್ಯುತ್‌ ತಂತಿಗಳಿಗೆ ದಾರ ಸುತ್ತಿಕೊಂಡು ತೊಂದರೆಯಾಗುತ್ತದೆ. ಮಹಡಿಯ ಮೇಲೆ ನಿಂತು ಗಾಳಿಪಟ ಹಾರಿಸುವ ಸಂದರ್ಭದಲ್ಲಿ ಮಕ್ಕಳು ಕಾಲು ಜಾರಿ ಬಿದ್ದು ಸಾಕಷ್ಟು ಪ್ರಾಣ ಹಾನಿಯು ಆಗಿದೆ. ಇಷ್ಟಾದರು ಸಹ ಅನಾಗರೀಕರಂತೆ ವರ್ತಿಸುತ್ತ ನಗರದ ಮಧ್ಯಭಾಗದಲ್ಲಿ ಗಾಳಿಪಟ ಹಾರಿಸುವ ಸಾಹಸಕ್ಕೆ ಮುಂದಾಗಿ ಪಕ್ಷಿಗಳ ಪ್ರಾಣಕ್ಕು ಕುತ್ತು ತರುವ ಅಮಾನವೀಯ ಪ್ರವೃತ್ತಿ ನಿಲ್ಲಬೇಕು ಎನ್ನುತ್ತಾರೆ ಪಕ್ಷಿಪ್ರಿಯರು.

Exit mobile version