Site icon
Harithalekhani

ಪಿಂಚಣಿ ನೀಡದ ರಾಜ್ಯ ಸರ್ಕಾರಕ್ಕೆ ಕಣ್ಣು ಮತ್ತು ಕಿವಿಗಳು ಇಲ್ಲ : ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಒಂದೆಡೆ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದ ಸಂಭ್ರವನ್ನು ಆಚರಿಸುತ್ತಿದ್ದರೆ.ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪಿಂಚಣಿ ಅವ್ಯವಸ್ಥೆ ಕುರಿತು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ಅವರು, ರಾಜ್ಯದಲ್ಲಿ ಐದಾರು ತಿಂಗಳಿನಿಂದ ಪಿಂಚಣಿ ಹಣ ಪಾವತಿಯಾಗದೇ ಅಂಗವಿಕಲರು, ವೃದ್ಧರು ಹಾಗೂ ವಿಧವೆಯರು ಪರಿತಪಿಸುತ್ತಿದ್ದಾರೆ.

ಅಂಗವಿಕಲ, ವೃದ್ಧಾಪ್ಯ ಮತ್ತು ವಿಧವಾ ವೇತನವನ್ನು ತಕ್ಷಣ ಬಿಡುಗಡೆ ಮಾಡಲು ಸರ್ಕಾರ ತುರ್ತು ಆದೇಶ ನೀಡಬೇಕು.ಕೊರೋನಾ ಸಂಕಷ್ಟದ ಸಮಯದಲ್ಲಿ  ಸಕಾಲಕ್ಕೆ ಪಿಂಚಣಿ ಕೈಗೆ ಸಿಗದೇ ಅಗತ್ಯ ಔಷಧಗಳನ್ನು ಕೊಳ್ಳಲೂ ಈ ಫಲಾನುಭವಿಗಳು ಪರದಾಡುತ್ತಿದ್ದಾರೆ. ಹಲವು ಮಂದಿಗೆ ಊಟಕ್ಕೂ ತತ್ವಾರವಾಗಿದೆ. ವರ್ಷಾಚರಣೆಯ ಸಂಭ್ರಮದಲ್ಲಿರುವ ಬಿಜೆಪಿ ಸರ್ಕಾರ ಮೊದಲು ಹಣ ಬಿಡುಗಡೆಗೆ ಆದೇಶ ಮಾಡುವಂತೆ ಆಗ್ರಹಿಸುತ್ತೇನೆ.

ಪಿಂಚಣಿ ಹಣಕ್ಕಾಗಿ ಕಳೆದ 5 ತಿಂಗಳಿಂದ ವೃದ್ಧಾಪ್ಯ, ವಿಧವಾ ಮತ್ತು ಅಂಗವಿಕಲ ಫಲಾನುಭವಿಗಳನ್ನು  ಅಲೆದಾಡಿಸಲಾಗುತ್ತಿದೆ. ಇದು ನಾಚಿಕೆಗೇಡು. ಈ ಸರ್ಕಾರಕ್ಕೆ ಕಣ್ಣು ಮತ್ತು ಕಿವಿಗಳು ಇಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

Exit mobile version