ದೊಡ್ಡಬಳ್ಳಾಪುರ: ಶ್ರಾವಣ ಮಾಸದ ಹಬ್ಬಗಳ ಸಾಲಿನ ಮೊದಲ ಹಬ್ಬ ನಾಗರ ಪಂಚಮಿಯನ್ನು ತಾಲೂಕಿನಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಈ ಬಾರಿ ಕೊವಿಡ್-19 ಸೋಂಕಿನ ಹಿನ್ನಲೆಯಲ್ಲಿ ಪ್ರಮುಖ ದೇವಾಲಯಗಳಲ್ಲಿ ಸಾಮೂಹಿಕ ನಾಗಪೂಜೆಗೆ ನಿರ್ಬಂಧ ವಿಸಲಾಗಿ,ಸರಳ ಆಚರಣೆ ಕಂಡು ಬಂದಿತು.
ಜನಪದರಲ್ಲಿ ಅಣ್ಣ ತಂಗಿಯರ ಬಾಂಧವ್ಯದ ಬೆಸುಗೆಯಾಗಿ ಆಚರಿಸಲ್ಪಡುವ ಈ ಹಬ್ಬದಲ್ಲಿ ನಾಗಪೂಜೆ ಪ್ರಮುಖವಾಗಿದೆ. ಶುಕ್ರವಾರವಷ್ಟೇ ನಾಗರ ಚೌತಿಯನ್ನು ಆಚರಿಸಲಾಯಿತು. ಮದುವೆಯಾದ ನವ ದಂಪತಿಗಳು ನಾಗರಕಲ್ಲುಗಳಿಗೆ ಹಾಲೆರೆದು ಪೂಜೆ ಸಲ್ಲಿಸಿದರು. ಮಹಿಳೆಯರು ನಾಗ ಪ್ರತಿಷ್ಠಾಪನೆಯಾಗಿರುವ ದೇವಾಲಯಗಳಿಗೆ ತೆರಳಿ ನಾಗರ ಕಲ್ಲಿಗೆ ಹಾಲು ಎರೆದು ಪೂಜೆ ಸಲ್ಲಿಸುವ ದೃಶ್ಯ ಸಾಮಾನ್ಯವಾಗಿತ್ತು. ದೇವಾಲಯಗಳಲ್ಲಿ ಪೂಜೆ ನಡೆಸಲಾಯಿತು.
ಘಾಟಿ ಕ್ಷೇತ್ರದಲ್ಲಿ ವಿಶೇಷ:
ನಾಗರ ಪಂಚಮಿ ಅಂಗವಾಗಿ ತಾಲೂಕಿನ ಘಾಟಿ ಪುಣ್ಯಕ್ಷೇತ್ರದಲ್ಲಿನ ನಾಗರಕಲ್ಲುಗಳಿಗೆ ಭಕ್ತಾದಿಗಳು ಹಾಲೆರೆದು ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯ ಆವರಣದಲ್ಲಿನ ನಾಗರಕಲ್ಲುಗಳಿಗೆ ಹಾಲೆರೆಯುವುದನ್ನು ದೇವಾಲಯದ ಆಡಳಿತ ಮಂಡಳಿ ನಿಷೇಸಲಾಗಿತ್ತು. ನಾಗರಪಂಚಮಿ ಅಂಗವಾಗಿ ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್‍ಯಕ್ರಮಗಳು ಜುರುಗಿದವು. ನೂರಾರು ಭಕ್ತರು ದೇವಾಲಯದಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದರು. ಆದರೆ ಕೊವಿಡ್-೧೯ ಹಿನ್ನಲೆಯಲ್ಲಿ ರಾಜಬೀದಿ ಉತ್ಸವ ನಡೆಯಲಿಲ್ಲ. ಭಾನುವಾರ ಲಾಕ್‌ಡೌನ್ ಹಿನ್ನಲೆಯಲ್ಲಿ ಭಕ್ತಾದಿಗಳಿಗೆ ದೇವರ ದರ್ಶನ ಇರುವುದಿಲ್ಲ.
ನಗರದ ನೆಲದಾಂಜನೇಯಸ್ವಾಮಿ ದೇವಾಲಯ ಮೊದಲಾಗಿ, ಕೆರೆಕಟ್ಟೆಯ ನಾಗರಕಲ್ಲುಗಳು ಹಾಗೂ ತಾಲೂಕಿನ ವಿವಿಧ ದೇವಾಲಯದಲ್ಲಿನ ನಾಗರಕಲ್ಲುಗಳಿಗೆ ಹಾಲೆರೆದು ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.