ದೊಡ್ಡಬಳ್ಳಾಪುರ: ಆಷಾಢ ಮುಗಿದ ನಂತರ ಬರುವ ಹಬ್ಬಗಳ ಸರಮಾಲೆ ಶ್ರಾವಣ ಮಾಸವನ್ನು ಸ್ವಾಗತಿಸಲು ಎಂದಿನಂತೆ ಕಾಣಬರುವ ಶ್ರಾವಣ ಮಾಸದ ಸಂಭ್ರಮಕ್ಕೆ ಈ
ಬಾರಿ ಕೊವಿಡ್–19 ಬ್ರೇಕ್ ಹಾಕಿದೆ.
ನಾಗರ ಚೌತಿ: ತಾಲೂಕಿನಲ್ಲಿ ನಾಗರ ಚೌತಿ ಅಂಗವಾಗಿ ಮಹಿಳೆಯರು ನಾಗರಕಲ್ಲುಗಳಿಗೆ ಹಾಲೆರೆದು ಪೂಜೆ ಸಲ್ಲಿಸಿದರು. ಆಷಾಢ ಮಾಸಕ್ಕೆ ತೆರಳಿದ್ದ, ನವ ವಧು ಶ್ರಾವಣ ಮಾಸಕ್ಕೆ ಗಂಡನ ಮನೆಗೆ ಬಂದು ನಾಗರ ಚೌತಿಯನ್ನು ಆಚರಿಸುವುದು ಸಂಪ್ರದಾಯವಾಗಿದ್ದು, ಈ ವರ್ಷದಲ್ಲಿ ಮದುವೆಯಾದ ನವ ದಂಪತಿಗಳು, ನಾಗರ ಚೌತಿ ಅಂಗವಾಗಿ ನಾಗರಕಲ್ಲುಗಳಿಗೆ ಹಾಲೆರೆದು ಪೂಜೆ ಸಲ್ಲಿಸಿದರು. ಆದರೆ ಹೆಚ್ಚಿನ ಜನ ಸೇರದೇ ಸರಳವಾಗಿ ಆಚರಿಸಲಾಯಿತು.
ಶನಿವಾರ ನಡೆಯಲಿರುವ ನಾಗರಪಂಚಮಿಗೆ ತಾಲೂಕಿನ ಘಾಟಿ ಕ್ಷೇತ್ರದ ದೇವಾಲಯ ಆವರಣದಲ್ಲಿನ ನಾಗರಕಲ್ಲುಗಳಿಗೆ ಹಾಲೆರೆಯುವುದನ್ನು ದೇವಾಲಯದ ಆಡಳಿತ ಮಂಡಳಿ ನಿಷೇಧಿಸಿದೆ.
ತಾಲೂಕಿನ ಮಧುರೆ ಹೋಬಳಿಯಲ್ಲಿರುವ ಕನಸವಾಡಿ ಪುಣ್ಯಕ್ಷೇತ್ರದ ಶ್ರೀ ಶನಿಮಹಾತ್ಮ ದೇವಾಲಯ, ಅರಳಮಲ್ಲಿಗೆ ಲಕ್ಷ್ಮೀ ಚೆನ್ನಕೇಶವಸ್ವಾಮಿ ದೇವಾಲಯದಲ್ಲಿ ಈ ಬಾರಿ ಶ್ರಾವಣ ಮಾಸದ ಶನಿವಾರದ ವಿಶೇಷ ಪೂಜೆಗಳನ್ನು ನಿರ್ಬಂಧಿಸಲಾಗಿದೆ.ನಗರದ ನೆಲದಾಂಜನೇಯಸ್ವಾಮಿ ದೇವಾಲಯ, ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ,ವೆಂಕಟರಮಣಸ್ವಾಮಿ ದೇವಾಲಯ ಮೊದಲಾದ ಕಡೆ ಶ್ರಾವಣ ಮಾಸದ ಅಂಗವಾಗಿ ವಿಶೇಷ ಪೂಜೆಗಳು ಇರುತ್ತವೆಯಾದರೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರದೇ ಸರಳವಾಗಿ ಆಚರಿಸಲಾಗುತ್ತಿದೆ.
ನೆಲಕ್ಕುರುಳಿದ ಇತಿಹಾಸವಿರುವ ಆರಳಿ ಮರ
ದೊಡ್ಡಬಳ್ಳಾಪುರದ ನೆಲದಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿರುವ ಶತಮಾನದ ಇತಿಹಾಸವಿರುವ ಅರಳಿ ಮರವೊಂದು ಮಳೆ ಗಾಳಿ ಹೊಡೆತಕ್ಕೆ ಸಿಲುಕಿ ನೆಲಕ್ಕುರುಳಿದ್ದು,ಯಾವುದೇ ಹೆಚ್ಚಿನ ಹಾನಿಯಾಗಿಲ್ಲ.