ದೊಡ್ಡಬಳ್ಳಾಪುರ: ಪ್ರತಿವರ್ಷ ಗಣೇಶ ಚತುರ್ಥಿ ಒಂದು ತಿಂಗಳಿರುವಂತೆಯೇ ಗಣೇಶ ಮೂರ್ತಿಗಳ ತಯಾರಿಕೆ ಕಾರ್ಯ ಬಿರುಸಾಗಿ ಸಾಗುವುದು ಸಾಮಾನ್ಯ. ಆದರೆ ಈ ಬಾರಿ ಕೊವಿಡ್–19 ಸೋಂಕು ಹರಡುತ್ತಿರುವ ಹಿನ್ನಲೆಯಲ್ಲಿ ವಿಸಲಾಗುತ್ತಿರುವ ಲಾಕ್ಡೌನ್ ಹಾಗೂ ಹಬ್ಬ ಉತ್ಸವಗಳಿಗೆ ಬ್ರೇಕ್ ಬಿದ್ದಿರುವುದರಿಂದ, ಸರ್ಕಾರ ಮುಂದೆ ಯಾವ ನಿರ್ಧಾರ ಕೈಗೊಳ್ಳಲಿದೆ ಎನ್ನುವುದನ್ನು ವಿಗ್ರಹ ತಯಾರಕರು ಎದುರು ನೋಡುತ್ತಿದ್ದಾರೆ.
ಪಾರಂಪರಿಕ ಮಣ್ಣಿನ ಗಣಪ:
ತಾಲೂಕಿನ ಕಂಟನಕುಂಟೆ, ಗುಂಡುಮಗೆರೆ, ಲಘುಮೇನಹಳ್ಳಿಗಳಲ್ಲಿ ಪಾರಂಪರಿಕ ಕುಂಬಾರ ವೃತ್ತಿ ಮಾಡುವ ಮಂದಿ ಗಣೇಶ ವಿಗ್ರಹಗಳ ತಯಾರಿಕೆ ಮಾಡುತ್ತಾರೆ. ಹಿಡಿಯಷ್ಟು ಚಿಕ್ಕ ಗಣಪನಿಂದ ಹಿಡಿದು 5 ಅಡಿ ಎತ್ತರದ ಗಣೇಶ ವಿಗ್ರಹಗಳು ಇಲ್ಲಿ ತಯಾರಾಗುತ್ತವೆ. ನೈಸರ್ಗಿಕ ಬಣ್ಣಗಳಿಂದ ಮೂರ್ತಿಗಳು ಹಾಗೂ ಬಣ್ಣರಹಿತ ಗಣಪನ ಮೂರ್ತಿಗಳೂ ತಯಾರಾಗುತ್ತವೆ. ಗಣೇಶ ಹಬ್ಬ ಒಂದು ತಿಂಗಳಿದ್ದಂತೆ ಸಗಟು ವ್ಯಾಪಾರಿಗಳು ಗಣೇಶ ಮೂರ್ತಿಗಳನ್ನು ಮಾರಾಟ ಮಾಡಲು ಆರಂಭಿಸುತ್ತಾರೆ. ಗಣೇಶನ ವಿಗ್ರಹಗಳಿಗೆ ಮುಂಗಡ ನೀಡಿ, ಇವರಿಂದ ಮಾರಾಟಗಾರರು ಖರೀದಿಸುತ್ತಾರೆ. ಆದರೆ ಇನ್ನೂ ಯಾವುದೇ ವ್ಯಾಪಾರ ಆರಂಭವಾಗಿಲ್ಲ. ಸರ್ಕಾರ ಸಾರ್ವಜನಿಕ ಗಣೇಶ ಉತ್ಸವಕ್ಕೆ ಅನುಮತಿ ನೀಡದಿರುವುದು ಬಹುತೇಕ ಖಚಿತ. ಇನ್ನು ಮನೆಗಳಲ್ಲಿ ಯಾವ ರೀತಿ ಹಬ್ಬ ಆಚರಿಸಬೇಕು ಎನ್ನುವ ಮಾರ್ಗಸೂಚಿ ಪ್ರಕಟವಾಗಿಲ್ಲ. ಹೀಗಾಗಿ ಗಣೇಶ ಮೂರ್ತಿಗಳನ್ನು ಎಷ್ಟು ತಯಾರು ಮಾಡುವುದು ಎನ್ನುವ ಗೊಂದಲದಲ್ಲಿದ್ದಾರೆ.
ಪ್ರತಿವರ್ಷ ಎಂದಿನಂತೆ ತಯಾರಿಸುವಷ್ಟು ಗಣೇಶ ಮೂರ್ತಿಗಳನ್ನು ತಯಾರಿಸಿದ್ದೇವೆ. ಆದರೆ 2.5 ಅಡಿಗಿಂತ ಎತ್ತರದ ಮೂರ್ತಿಗಳನ್ನು ಹೊಸದಾಗಿ ತಯಾರು ಮಾಡಿಲ್ಲ. ಹಿಂದಿನ ವರ್ಷದ ದೊಡ್ಡ ಮೂರ್ತಿಗಳು ಸಹ ಇವೆ. ಪ್ರತಿವರ್ಷ ಇಷ್ಟೊತ್ತಿಗಾಗಲೇ ಮಾರಾಟಗಾರರು ಮುಂಗಡ ನೀಡಿ ಖರೀದಿಸುತ್ತಿದ್ದರು. ಈಗ ಕರೊನಾ ಕಾರಣವೊಡ್ಡಿ ಯಾರೂ ಮುಂದೆ ಬಂದಿಲ್ಲ. ವರಲಕ್ಷ್ಮೀ ಹಬ್ಬದ ನಂತರ ಮುಂದೇನು ಎನ್ನುವ ನಿರ್ಧಾರ ಮಾಡುತ್ತೇವೆ. ಈಗಾಗಲೇ ಕುಂಬಾರ ಕಸುಬು ಸಂಕಷ್ಟದಲ್ಲಿದೆ. ಕರೊನಾ ಲಾಕ್ಡೌನ್ನಿಂದಾಗಿ, ಮಡಿಕೆ, ಕುಂಡಗಳು, ಸೇರಿದಂತೆ ಮಣ್ಣಿನ ಉತ್ಪನ್ನಗಳು ಸಹ ಮಾರಾಟವಾಗಿಲ್ಲ. ಸರ್ಕಾರ ಸಾರ್ವಜನಿಕ ಉತ್ಸವಕ್ಕೆ ಅನುಮತಿ ನೀಡದಿದ್ದರೂ ಕನಿಷ್ಟ ಮನೆಗಳಲ್ಲಿ ಗಣೇಶ ಮೂರ್ತಿ ಕೂಡಿಸಲು ಅನುಮತಿ ನೀಡಿ, ಮೂರ್ತಿಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಬೇಕು. ರಾಜ್ಯ ಕುಂಬಾರ ಸಂಘದಿಂದ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದ್ದು, ಈವೆರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎನ್ನುತ್ತಾರೆ ಗಣೇಶ ಮೂರ್ತಿ ತಯಾರಕರಾದ ಕಂಟನಕುಂಟೆಯ ಶಿವಾನಂದ್.
ಮನೆಗಳಲ್ಲಾದರೂ ಗಣಪತಿ ಮೂರ್ತಿ
ಇಡಲು ಅವಕಾಶ
ನೀಡಿ
ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಈಗಾಗಲೇ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ. ಇತರೆ ಸಮುದಾಯಗಳಿಗೆ ಬಿಡುಗಡೆ ಆದಂತೆ ಕುಂಬಾರ ಸಮುದಾಯಕ್ಕೆ ನೆರವು ಬಂದಿಲ್ಲ.ಗಣಪತಿ ಮೂರ್ತಿಗಳನ್ನು ಇಡಲು ಅವಕಾಶ ನೀಡದಿದ್ದರೆ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಲಿದೆ.ಹೀಗಾಗಿ ಕನಿಷ್ಠ ಮನೆಗಳಲ್ಲಾದರೂ ಇಡಲು ಅವಕಾಶ ನೀಡಬೇಕು – ವೆಂಕಟಾಚಲಯ್ಯ, ಕುಂಬಾರರ
ಸಂಘದ ಬೆಂಗಳೂರು
ಗ್ರಾಮಾಂತರ ಜಿಧ್ಯಕ್ಷ.