Site icon Harithalekhani

ಕರೊನಾ ಲಾಕ್‌ಡೌನ್ ನಡುವೆ ಪಡಿತರ ವಿತರಣೆ ಆರಂಭ: ಕಾಡಿದ ಸರ್ವರ್ ಹಾಗು ವಿದ್ಯುತ್ ಸಮಸ್ಯೆ

ದೊಡ್ಡಬಳ್ಳಾಪುರ: ತಾಲೂಕು ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜುಲೈ 22ರವರೆಗೆ ಲಾಕ್‌ಡೌನ್ ಘೋಷಿಸಲಾಗಿದೆ.ಈ ನಡುವೆ ತಿಂಗಳ ಪಡಿತರ ವಿತರಣೆ ಆರಂಭವಾಗಿದ್ದು,ಪಡಿತರದಾರರು ಬೆಳಗಿನಿಂದಲೇ ಸಾಲುಗಟ್ಟಿ ನಿಲ್ಲುವಂತಾಗಿದೆ.

ಲಾಕ್‌ಡೌನ್ ಹಿನ್ನಲೆಯಲ್ಲಿ ಮಧ್ಯಾಹ್ನ 12ರವರೆಗೆ ಮಾತ್ರ ಅಗತ್ಯ ವಸ್ತುಗಳನ್ನು ಕೊಳ್ಳಲು ಅವಕಾಶ ಕಲ್ಪಿಸಿರುವುದರಿಂದ ಪಡಿತರ ಧಾನ್ಯವನ್ನು ಸಹ 12ರವರೆಗೆ ಮಾತ್ರ ನೀಡಲು ಸೂಚಿಸಲಾಗಿದೆ. ಹೀಗಾಗಿ ಪಡಿತರ ಪಡೆಯಲು ಬೆಳಿಗ್ಗೆ 9 ಗಂಟೆಯಿಂದಲೇ ಪಡಿತರದಾರರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ.

ಪಡಿತರ ವಿತರಣೆ ವಿವರ:

ಹರಿತಲೇಖನಿಗೆ ಸಿಕ್ಕಿರುವ ಮಾಹಿತಿಯಂತೆ ಈ ತಿಂಗಳಿನಿಂದ ಬಿಪಿಎಲ್ ಪಡಿತರದಾರರಿಗೆ ಯೂನಿಟ್ ಲೆಕ್ಕದಲ್ಲಿ 8 ಕೆ.ಜಿ ಅಕ್ಕಿ, 2 ಕೆ.ಜಿ ರಾಗಿ ಹಾಗೂ ಒಂದು ಪಡಿತರ ಚೀಟಿಗೆ 2 ಕೆ.ಜಿ. ಗೋಧಿ ಉಚಿತವಾಗಿ ನೀಡಲಾಗುತ್ತಿದೆ. ಎಪಿಎಲ್ ಕಾರ್ಡ್‌ದಾರರಿಗೆ ಒಬ್ಬ ಸದಸ್ಯ 5 ಕೆ.ಜಿ. ಅಕ್ಕಿ ಹಾಗೂ ಹೆಚ್ಚಿನವರಿಗೆ 10 ಕೆ.ಜಿ ಅಕ್ಕಿ,ಕೆ.ಜಿಗೆ 15 ರೂ ನಂತೆ ನೀಡಲಾಗುವುದು.ಅಂತ್ಯೋದಯಕ್ಕೆ 20ಕೆ.ಜಿ ಅಕ್ಕಿ ಹಾಗೂ 15 ಕೆ.ಜಿ ರಾಗಿ ವಿತರಿಸಲಾಗುವುದು.ಆಧಾರ್ ಕಾರ್ಡ್ ಅಥವಾ ಪಡಿತರ ಕಾರ್ಡ್ ಇಲ್ಲದವರಿಗೆ ಪಡಿತರ ವಿತರಣೆ ಮಾಡುತ್ತಿಲ್ಲ.ನ್ಯಾಯ ಬೆಲೆ ಅಂಗಡಿಗೆ ಬರುವ ಪ್ರತಿ ಪಡಿತರದಾರರನ್ನು ಅಂತರ ಕಾಪಾಡಿಕೊಳ್ಳುವಂತೆ ವ್ಯವಸ್ಥೆ ಮಾಡಿ, ಪ್ರತಿಯೊಬ್ಬರಿಗೂ ಸ್ಯಾನಿಟೈಸರ್ ಹಾಕಲಾಗುತ್ತಿದೆ.ದಿನಕ್ಕೆ 200 ಪಡಿತರದಾರರಿಗೆ ಟೋಕನ್ ನೀಡಿ,ಮಧ್ಯಾಹ್ನ 12ಗಂಟೆಯವರೆಗೆ ಪಡಿತರ ಧಾನ್ಯ ವಿತರಿಸಲಾಗುತ್ತಿದೆ. ಆದರೆ ಸರ್ವರ್ ಹಾಗೂ ವಿದ್ಯುತ್ ಸಮಸ್ಯೆಗಳಿಂದಾಗಿ ಪಡಿತರ ವಿತರಣೆ ಮಾಡುವುದು ವಿಳಂಬವಾಗುತ್ತಿದೆ ಎಂದು ಕುಚ್ಚಪ್ಪನ ಪೇಟೆಯ ನ್ಯಾಯಬೆಲೆ ಅಂಗಡಿ ಮಾಲೀಕ ಗಂಗಾಪ್ರಸಾದ್ ತಿಳಿಸಿದ್ದಾರೆ.

ತಿಂಗಳಿಡೀ ಎಲ್ಲಾ ನ್ಯಾಯಬೆಲೆ ಅಂಗಡಿಗಳು ತೆರೆದಿರಲಿ:

ಈಗ ಪಡಿತರ ಧಾನ್ಯ ಪಡೆಯಲು  ಪೋರ್ಟಬಿಲಿಟಿ ಇರುವುದರಿಂದ ಪಡಿತರದಾರರು ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರವನ್ನು ಪಡೆಯಬಹುದಾಗಿದೆ. ಆದರೆ ಬಹಳಷ್ಟು ಅಂಗಡಿಗಳು ಕೇವಲ 5 ರಿಂದ 6 ದಿನ ದಿನಸಿ ನೀಡಿ ಬಾಗಿಲು ಮುಚ್ಚುತ್ತವೆ. ಇದರಿಂದ ಬೇರೆ ಅಂಗಡಿಗಳಲ್ಲಿ ಪಡಿತರದಾರರು ಮುಗಿ ಬೀಳುವ ಪರಿಸ್ಥಿತಿ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್ಲಾ ಪಡಿತರ ಅಂಗಡಿಗಳು ತಿಂಗಳು ಪೂರ್ತಿ ಕಾರ್‍ಯ ನಿರ್ವಹಿಸಿ,ನೂಕು ನುಗ್ಗಲು ಮಾಡಿಕೊಳ್ಳದೇ ಎಲ್ಲಾ ಪಡಿತರದಾರರು ಪಡಿತರ ಧಾನ್ಯ ಪಡೆಯುವಂತೆ ಆಹಾರ ಇಲಾಖೆ ವ್ಯವಸ್ಥೆ ಮಾಡಬೇಕಿದೆ ಎಂದು ಪಡಿತರದಾರರಾದ ಶ್ರೀನಿವಾಸ್, ನಾರಾಯಣಪ್ಪ ಒತ್ತಾಯಿಸಿದ್ದಾರೆ.

Exit mobile version