Site icon Harithalekhani

ಮನೆಗೊಂದು ನುಗ್ಗೆ ಮರ ಇದ್ದರೆ ಇಡೀ ಕುಟುಂಬದ ಆರೋಗ್ಯಕ್ಕೆ ಸಹಕಾರಿ – ಸಿ.ಎಸ್.ಕರೀಗೌಡ

ದೊಡ್ಡಬಳ್ಳಾಪುರ: ಇಲ್ಲಿನ ಕೈಗಾರಿಕಾ ಪ್ರದೇಶದ ಗಾರ್ಮೆಂಟ್ಸ್ಗಳಲ್ಲಿ ಕೆಲಸ ಮಾಡುವ ಮಹಿಳೆಯರ ಆರೋಗ್ಯ ತಪಾಸಣೆ ನಡೆಸಿದಾಗ ಶೇ25ರಷ್ಟು ಮಹಿಳೆಯರಲ್ಲಿ ರಕ್ತ ಹೀನತೆ, ಕಬ್ಬಣದ ಅಂಶದ ಕೊರತೆ, ಸಕ್ಕರೆ ಕಾಯಿಲೆ  ಇರುವುದು ಕಂಡು ಬಂದಿದೆ. ಈ ಎಲ್ಲಾ ಕೊರತೆಗಳನ್ನು ಹೊಗಲಾಡಿಸುವ ಶಕ್ತಿ ನುಗ್ಗೆ ಸೊಪ್ಪು, ಕಾಯಿಗಳಿಗೆ ಇದೆ ಎಂದು ಕೃಷಿ ಮಾರುಕಟ್ಟೆ ನಿರ್ದೇಶಕ ಸಿ.ಎಸ್.ಕರೀಗೌಡ ಹೇಳಿದರು. 

ಅವರು, ನಗರದ ಬೆಸೆಂಟ್ ಪಾರ್ಕ್ ರಸ್ತೆಯ ಎಂ.ಎ.ಪ್ರಕಾಶ್ ಬಡಾವಣೆಯಲ್ಲಿ ಪರಿಸರ ಸಿರಿ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಮನೆಗೊಂದು ನುಗ್ಗೆ ಮನೆತುಂಬಾ ಆರೋಗ್ಯ ಕಾರ್ಯಕ್ರಮದಡಿ ಬಡಾವಣೆಯ ಮನೆಗಳ ಮುಂದೆ ನುಗ್ಗೆ ಸಸಿಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ನುಗ್ಗೆ ಕಾಯಿ ಹಾಗೂ ಸೊಪ್ಪಿನಲ್ಲಿ ಕಬ್ಬಣದ ಅಂಶ  ಹೇರಳವಾಗಿದೆ. ಉತ್ತಮ ಪೋಷಕಾಂಶ ನೀಡುತ್ತದೆ. ಆದರೆ ಮನೆಗಳ ಮುಂದೆ ನುಗ್ಗೆ ಮರ ಹಾಕುವುದು ತಪ್ಪು ಎನ್ನುವ ಮೂಢನಂಬಿಕೆಯಿಂದ ಹೊರಬರಬೇಕಿದೆ. ಪೌಷ್ಟಿಕಾಂಶ ಆಹಾರ ಎಲ್ಲರಿಗೂ ಬೇಕಾಗಿದ್ದು, ಅದರಲ್ಲೂ ಮಹಿಳೆಯರಿಗೆ ಹೆಚ್ಚಿನ ಅಗತ್ಯವಿದೆ. ನುಗ್ಗೆ ಸೊಪ್ಪಿಂದ ಮಹಿಳೆಯರಿಗೆ ಬರುವ  ಕಾಯಿಲೆಗಳಿಗೆ ರಾಮಬಾಣ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಮನೆಗೊಂದು ನುಗ್ಗೆ ಮರ ಮನೆ ತುಂಬಾ ಆರೋಗ್ಯ ಜನಾಂದೋಲನವಾಗಿ ರೂಪುಗೊಳ್ಳಬೇಕು ಎಂದರು. 

ಮನೆಯಲ್ಲಿ ಮಹಿಳೆಯರು ಆರೋಗ್ಯವಾಗಿದ್ದರೆ ಮಾತ್ರ ಇಡೀ ಕುಟುಂಬ ಆರೋಗ್ಯವಾಗಿರಲು ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ. ಆರೋಗ್ಯವಂತ ಪ್ರಜೆಗಳೆ ದೇಶದ ನಿಜವಾದ ಸಂಪತ್ತು ಎನ್ನುವುದು ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಈ ಸಂದರ್ಭದಲ್ಲಿ ಎಲ್ಲರಿಗೂ ಅರಿವಾಗಿದೆ. ಇತರೆ ಜ್ವರಗಳ ವೈರಸ್ ನಂತೆಯೇ ಕೊರೊನಾ ವೈರಸ್ ಸಹ. ಅನಾವಶ್ಯಕ ಭಯಕ್ಕೆ ಒಳಗಾಗಬಾರದು. ಯಾವುದೇ ವೈರಸ್ ಸೋಂಕಿಗೆ ಒಳಗಾಗದೇ ಇರಲು ಪೋಷಕಾಂಶ ಯುಕ್ತ ಆಹಾರ, ಬಿಸಿ ನೀರು ಸೇವನೆಗಿಂತಲು ದೊಡ್ಡ ಔಷಧಿ ಬೇರೆ ಯಾವುದೂ ಇಲ್ಲ. ಜನವರಿ ತಿಂಗಳಿಂದ ಈಚಿನ ಅಂಕಿ ಅಂಶಗಳನ್ನು ಗಮನಿಸಿದರೆ ಕ್ಯಾನ್ಸರ್, ಕಿಡ್ನಿ ವೈಪಲ್ಯ, ಹೃದಯಾಘಾತಗಳಿಂದ ಮೃತಪಟ್ಟರ ಸಂಖ್ಯೆಯೇ ಹೆಚ್ಚಾಗಿದೆಯೇ ವಿನಹ ಕೊರೊನಾ ವೈರಸ್ ಸೋಂಕಿನ ಜ್ವರದಿಂದಲೇ ಮೃತಪಟ್ಟಿರುವವರ ಸಂಖ್ಯೆ ಕಡಿಮೆಯಾಗಿದೆ ಎಂದರು.   

ಪರಿಸರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥರೆಡ್ಡಿ ಮಾತನಾಡಿ, ನುಗ್ಗೆ ಸಸಿಗಳನ್ನು ನೆಡುವ ಬಗ್ಗೆ ಜನರಲ್ಲಿ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಪ್ರತಿಯೊಬ್ಬರ ಮನೆ ಮುಂದೆ ಒಂದು ನುಗ್ಗೆ ಮರ ಬೆಳೆಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಕಾರ್ಯಕ್ರಮ ರೂಪಿಸಲಾಗುತ್ತಿದೆ. ರಸ್ತೆ ಬದಿಗಳಲ್ಲಿ ಸಸಿ ನೆಡುವುದಕ್ಕೆ ಚಾಲನೆ ನೀಡಿ, ಬಡಾವಣೆಯಲ್ಲಿ ವಿವಿಧ ಜಾತಿಯ ಗಿಡಗಳನ್ನು ಹಾಕಿ ಹಸಿರೀಕರಣ ಮಾಡಲು ಕಾರ್ಯೋನ್ಮುಖರಾಗಿದ್ದೇವೆ  ಎಂದರು. 

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಕೆ.ಬಿ.ಮುದ್ದಪ್ಪ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ವಡ್ಡರಹಳ್ಳಿ ರವಿ, ಐಟಿ ಎಂಜಿನಿಯರ್ ಜಿ.ರಾಜಶೇಖರ್,ಪತ್ರಕರ್ತರಾದ ಎನ್.ಎಂ.ನಟರಾಜ್, ಶ್ರೀಕಾಂತ್,ಎಂ.ಎ.ಪ್ರಕಾಶ್ ಬಡಾವಣೆಯ ನಿವಾಸಿಗಳಾದ ಭಾಸ್ಕರ್, ರಾಜು, ಶಂಕರ್, ಹರೀಶ್,ಸುಭದ್ರಾಬಾಯಿ, ವೆಂಕೋಬರಾವ್, ದಾಮೋದರರೆಡ್ಡಿ, ಮಧುಮತಿ, ಅನುಸೂಯ,ಗಿರೀಶ್, ಸುಷ್ಮಾ, ಚಂಪಾ  ಹಿರೇಮಠ, ಸೋಮೇಶ್ವರ ಬಡಾವಣೆಯ ವಾಯು ವಿಹಾರಿಗಳ 26 ಬ್ಯಾಚ್ನ ಗದುಗಯ್ಯ, ಸಿ.ರಾಮಯ್ಯ, ಗಂಗಯ್ಯ, ಶಂಕರಚಾರ್,ಗೋಪಾಲ್, ಆಶಿಶ್ಜೈನ್, ಮಂಜುನಾಥ್ ನಾಗ್ ಇದ್ದರು.

Exit mobile version