Site icon Harithalekhani

ಹೊಸಕೋಟೆ ನಗರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರ ವ್ಯಾಪ್ತಿಯಲ್ಲಿ ಕೊರೋನಾ ವೈರಸ್ ಸೋಂಕು ಹರಡದಂತೆ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸಿ.ಆರ್.ಪಿ.ಸಿ. 1973ರ ಕಲಂ 144(3)ರ ಮೇರೆಗೆ, ದಿನಾಂಕ 29.06.2020 ರಿಂದ ಮುಂದಿನ ಆದೇಶದವರೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದನ್ನು ಕಡ್ಡಾಯಗೊಳಿಸಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದಾರೆ. 

ಹೊಸಕೋಟೆ ನಗರ ವ್ಯಾಪ್ತಿಯಲ್ಲಿ ಸಂತೆ, ಜಾತ್ರೆ, ಮೆರವಣಿಗೆ, ಸಮಾವೇಶ, ಸಮ್ಮೇಳನ, ಕ್ರೀಡಾಕೂಟ ಹಾಗೂ ಇತರೆ ಯಾವುದೇ ಧಾರ್ಮಿಕ ಸಮಾರಂಭಗಳು, ಹೆಚ್ಚು ಜನರು ಗುಂಪು ಸೇರುವುದು, ಬೇಸಿಗೆ ಶಿಬಿರ, ಪ್ರವಾಸ ಸ್ನೇಹ ಸಮ್ಮೇಳನ, ಸಂಗೀತ ಸಮ್ಮೇಳನ, ನಾಟಕೋತ್ಸವ, ವಿಚಾರ ಗೋಷ್ಠಿ ಮುಂತಾದವುಗಳನ್ನು ನಿಷೇಧಿಸಲಾಗಿದೆ. ದಿನನಿತ್ಯ ಬಳಕೆ ಮಾಡುವಂತಹ ವಸ್ತುಗಳು ಹಾಗೂ ತರಕಾರಿ ಮಾರುಕಟ್ಟೆಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ.ಆದರೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ಮಾಸ್ಕ್ ಹಾಗೂ ಸ್ಯಾನಿಟೈಜರ್ ಬಳಸುವುದು ಕಡ್ಡಾಯಗೊಳಿಸಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಮತ್ತು ಶವ ಸಂಸ್ಕಾರಕ್ಕೆ ಈ ಆದೇಶ ಅನ್ವಯಿಸುವುದಿಲ್ಲ. ಆದೇಶ ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 188ರ ಪ್ರಕಾರ ಕ್ರಮವನ್ನು ಜರುಗಿಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಪಿ.ಎನ್.ರವೀಂದ್ರ ಆದೇಶದಲ್ಲಿ ತಿಳಿಸಿದ್ದಾರೆ.

Exit mobile version