ದೊಡ್ಡಬಳ್ಳಾಪುರ: ನಗರದ ಭುವನೇಶ್ವರಿ ನಗರದ ನಿವಾಸಿ ನೇಯ್ಗೆ ಕಾರ್ಮಿಕ ನಾರಾಯಣ(೪೫),ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.
ಭುವನೇಶ್ವರಿ ನಗರದ ೯ನೇ ಕ್ರಾಸ್ನಲ್ಲಿ ವಾಸವಾಗಿದ್ದ ನಾರಾಯಣ,ನಗರದ ವೀರಭದ್ರನ ಪಾಳ್ಯದಲ್ಲಿ ೩ಬಾಡಿಗೆ ಮಗ್ಗಗಳನ್ನು ಕೂಲಿ ವಾರ್ಪು ತಂದು ನಡೆಸುತ್ತಿದ್ದ.ಮೃತನಿಗೆ ಹೆಂಡತಿ,ಒಂದು ಗಂಡು ಹಾಗೂ ಒಂದು ಹೆಣ್ಣು ಮಕ್ಕಳಿದ್ದಾರೆ.
ಇತ್ತೀಚೆಗೆ ನೇಕಾರಿಕೆ ಸಂಕಷ್ಟಕ್ಕೆ ಸಿಲುಕಿದ್ದರಿಂದ ಮಗ್ಗಗಳಲ್ಲಿ ಸಂಪಾದನೆಯಾಗದೇ,ಸಾಲ ಮಾಡಿಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ. ಮೃತನ ಹೆಂಡತಿ ಸಹ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದಾಳೆ.ತೀವ್ರ ನೊಂದಿದ್ದ ಆತ ಮಂಗಳವಾರ ಬೆಳಗಿನ ಜಾವ ನಗರದ ಹೊರವಲಯದ ತಿಪ್ಪಾಪುರ ರಸ್ತೆಯ ಜಮೀನಿನ ನಿರ್ಜನ ಪ್ರದೇಶದಲ್ಲಿದ್ದ ಹುಣಸೆ ಮರಕ್ಕೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ.
ಬೆಳಿಗ್ಗೆ 9.30ಕ್ಕೆ ದಾರಿಹೋಕರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೊಹಜರ್ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪರಿಹಾರ ನೀಡಿ
ನೇಕಾರ ಆತ್ಮಹತ್ಯೆ ಮಾಡಿಕೊಂಡಿರುವುದು ದುರಂತದ ಸಂಗತಿಯಾಗಿದ್ದು, ನೇಕಾರರು ದೃತಿಗೆಡದೇ ಸವಾಲುಗಳನ್ನು ಎದುರಿಸಬೇಕಿದೆ. ಸರ್ಕಾರ ಇನ್ನಾದರೂ ನೇಕಾರರ ಸಂಕಷ್ಟಗಳನ್ನು ಅರ್ಥಮಾಡಿಕೊಳ್ಳಬೇಕಿದೆ. ತಕ್ಷಣವೇ ಮೃತನ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಬೇಕಿದೆ ಎಂದು ನೇಕಾರರ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಜಿ.ಹೇಮಂತರಾಜು ಹಾಗೂ ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಪಿ.ಎ.ವೆಂಕಟೇಶ್ ಒತ್ತಾಯಿಸಿದ್ದಾರೆ.