ದೊಡ್ಡಬಳ್ಳಾಪುರ : ಕೋವಿಡ್-19 ಲಾಕ್‌ಡೌನ್ ಹಿನ್ನಲೆ ಆರ್ಥಿಕ ಸಂಕಷ್ಟಕ್ಕೊಳಗಾದ ಅಗಸ ಹಾಗೂ ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವವರಿಗೆ ರಾಜ್ಯ ಸರ್ಕಾರ ಪರಿಹಾರಧನ ಘೋಷಿಸಿದ್ದು, ನೈಜ ಫಲಾನುಭವಿಗಳಿಗೆ ಪರಿಹಾರ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ಗ್ರಾಮಾಂತರ ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್.ಕೆ.ನಾಯಕ್ ಹೇಳಿದರು.
ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಮ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿಂದು ನಡೆದ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ವತಿಯಿಂದ ಮುಖ್ಯಮಂತ್ರಿಗಳು ಅಗಸರಿಗೆ ಹಾಗೂ ಕ್ಷೌರಿಕರಿಗೆ ಒಂದು ಬಾರಿ ರೂ.5000 ಸಾವಿರ ಪರಿಹಾರಧನವನ್ನು ಘೋಷಿಸಿರುವ ಹಿನ್ನೆಲೆ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿಯವರು ಫಲಾನುಭವಿಗಳು ಈ ಸೌಲಭ್ಯ ಪಡೆಯಲು ಉದ್ಯೋಗ ದೃಢೀಕರಣ ಪತ್ರ ಸೇರಿದಂತೆ ನಿರ್ದಿಷ್ಟ ದಾಖಲೆಗಳಾದ ಆಧಾರ್ ಕಾರ್ಡ್, ಬಿ.ಪಿ.ಎಲ್. ಕಾರ್ಡ್, ಜನ್ಮ ದಿನಾಂಕಕ್ಕೆ ಸಂಬಂಧಪಟ್ಟ ದಾಖಲೆ ಹಾಗೂ ಪಾಸ್ ಪೋರ್ಟ್ ಅಳತೆ ಒಂದು ಭಾವಚಿತ್ರ ಅಗತ್ಯ ಇದೆ ಎಂದು ಹೇಳಿದರು.
ಸೌಲಭ್ಯ ಪಡೆಯಲು ಸೇವಾಸಿಂಧು ಪೋರ್ಟಲ್ ಮೂಲಕವೇ ಅರ್ಜಿ ಸಲ್ಲಿಸಬಹುದು. ಕ್ಷೌರಿಕ ವೃತ್ತಿಯ ಪರವಾನಗಿ ಪಡೆದ ಅಂಗಡಿ ಅಥವಾ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ಅರ್ಜಿ ಸಲ್ಲಿಸಿದಲ್ಲಿ, ಅಧಿಕಾರಿಗಳು ಕಡ್ಡಾಯವಾಗಿ ಸ್ಥಳ ಪರಿಶೀಲನೆ ನಡೆಸಿ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದು ತಿಳಿಸಿದರು.
ಅರ್ಜಿ ಸಲ್ಲಿಸಲು ಇಚ್ಛಿಸುವ ಫಲಾನುಭವಿಗಳು, ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಸೇರಿದಂತೆ ಗ್ರಾಮ ಪಂಚಾಯಿತಿಯ ಅಧಿಕಾರಿಗಳಿಂದ ಉದ್ಯೋಗ ದೃಢೀಕರಣ ಪತ್ರವನ್ನು ಪಡೆದು ಬಳಿಕ ಅರ್ಜಿಯನ್ನು ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಹೇಳಿದರು.
ಉದ್ಯೋಗ ದೃಢೀಕರಣ ಪತ್ರ ನೀಡುವ ಅಧಿಕಾರಿಗಳು ವೃತ್ತಿಯ ನೈಜತೆ ವಯಸ್ಸು ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಪರಿಶೀಲನೆ ನಡೆಸಿದ ನಂತರವೇ ದೃಢೀಕರಣ ಪತ್ರವನ್ನು ನೀಡಬೇಕು ಎಂದು ತಿಳಿಸಿದರು.
ಕಾರ್ಮಿಕ ಅಧಿಕಾರಿ ಧನಂಜಯ್ ಅವರು ಮಾತನಾಡಿ ಮಹಿಳಾ ಫಲಾನುಭವಿಗಳು ಕ್ಷೌರಿಕ ವೃತ್ತಿಯಲ್ಲಿ ತೊಡಗಿಸಿಕೊಂಡಿದರೆ, ಮಾತ್ರ ಪರಿಹಾರ ಸೌಲಭ್ಯಕ್ಕೆ ಅರ್ಹರಾಗುತ್ತಾರೆ. ಬ್ಯೂಟೀಷಿಯನ್ ಅಥವಾ ಇತರೆ ಕೆಲಸಗಳನ್ನು ನಿರ್ವಹಿಸುತ್ತಿರುವಂತಹವರು ಈ ಸೌಲಭ್ಯ ಪಡೆಯಲು ಅರ್ಹರಿರುವುದಿಲ್ಲ ಎಂದರು.
ಸಭೆಯಲ್ಲಿ ಕಾರ್ಮಿಕ ಅಧಿಕಾರಿಗಳಾದ ನಿರಂಜನ್, ಶಬಾನಾ ಅಜ್ಮಿ, ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಸುಬ್ಬಾರಾವ್.ಎಸ್, ಕಾರ್ಮಿಕ ನಿರೀಕ್ಷಕರುಗಳಾ ಪ್ರದೀಪ್, ಸುರೇಶ್, ನಾಗರತ್ನ, ಅಂಬಿಕಾ, ಸೇವಾಸಿಂಧು ತಾಂತ್ರಿಕ ಸಲಹೆಗಾರ ಮಂಜೇಶ್ ಸೇರಿದಂತೆ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.