ದೊಡ್ಡಬಳ್ಳಾಪುರ: ಕೋವಿಡ್-19 ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕೈಮಗ್ಗ ಮತ್ತು ವಿದ್ಯುತ್ ಮಗ್ಗ ನೇಕಾರಿಕೆ ಚಟುವಟಿಕೆಯಲ್ಲಿ ತೊಡಗಿರುವ ಕೂಲಿ ಕಾರ್ಮಿಕರಿಗೆ ನೇರವಾಗಿ ಆಧಾರ್ ಲಿಂಕ್ ಹೊಂದಿರುವ ಬ್ಯಾಂಕ್ ಖಾತೆಗೆ ತಲಾ ₹2000 ರಂತೆ ಪಾವತಿಸಲು ಸರ್ಕಾರದ ಆದೇಶವಾಗಿದೆ. ಕೈಮಗ್ಗ ನೇಕಾರರಿಗೆ ಈಗಾಗಲೇ ಆನ್ಲೈನ್ ಮೂಲಕ ಅರ್ಜಿ ಪಡೆದು₹2000 ಪರಿಹಾರ ಪಾವತಿಸಲಾಗುತ್ತಿದೆ ಎಂದು ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕ ಗಂಗಯ್ಯ ತಿಳಿಸಿದ್ದಾರೆ.
ಅವರು ಈ ಬಗ್ಗೆ ಮಾಹಿತಿ ನೀಡಿ,ವಿದ್ಯುತ್ ಮಗ್ಗ ಕೂಲಿ ಕಾರ್ಮಿಕರು ಆನ್ಲೈನ್ ಮೂಲಕ ‘ಸೇವಾಸಿಂಧು’ವಿನಲ್ಲಿ ಅಗತ್ಯ ದಾಖಾಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು. ಕೈಮಗ್ಗ ಮತ್ತು ಜವಳಿ ಇಲಾಖೆಯ ಫೋರ್ಟಲ್ನಲ್ಲಿ ನಿಗಧಿತ ಅರ್ಜಿ ನಮೂನೆ, ಮುಚ್ಚಳಿಕೆ ಪತ್ರದ ನಮೂನೆ ಮತ್ತು ಸಲ್ಲಿಸಬೇಕಾದ ದಾಖಾಲಾತಿಗಳ ವಿವರಗಳು ಲಭ್ಯ ಇವೆ. ಜಿಲ್ಲೆಯ ಅರ್ಹ ವಿದ್ಯುತ್ ಮಗ್ಗದ ಕೂಲಿ ಕಾರ್ಮಿಕರಿಗೆ ಇಲಾಖೆಯಿಂದ ದೊರೆಯುವ ಈ ಸೌಲಭ್ಯದ ಬಗ್ಗೆ ವ್ಯಾಪಕ ಪ್ರಚಾರ ಮತ್ತು ತಿಳುವಳಿಕೆಯನ್ನು ನೀಡಲು ಜೂ18 ರಂದು ಬೆಳಿಗ್ಗೆ 11ಗಂಟೆಗೆ ಉಪನಿರ್ದೇಶಕರ ಕಚೇರಿ ಕೈಮಗ್ಗ ಮತ್ತು ಜವಳಿ ಇಲಾಖೆ ಗಾರ್ಮೆಂಟ್ಸ್ ತರಬೇತಿ ಸಂಸ್ಥೆ ಅಪೆರಲ್ ಪಾರ್ಕ್ ದೊಡ್ಡಬಳ್ಳಾಪುರ ಇಲ್ಲಿ ವಿದ್ಯುತ್ ಮಗ್ಗ ನೇಕಾರರ ಸಹಕಾರ ಸಂಘಗಳ ಪ್ರತಿನಿಧಿಗಳು, ನೇಕಾರರ ಹೋರಾಟ ಸಮಿತಿ, ನೇಕಾರರ ಹೋರಾಟ ವೇದಿಕೆ, ನೇಕಾರ ಮುಖಂಡರು, ಮಾಸ್ಟರ್ ವಿವರ್ಸ್ ಮುಂತಾದ ಪ್ರತಿನಿಧಿಗಳಿಗೆ ಕಾರ್ಯಕ್ರಮದ ಮಾಹಿತಿ ಸಭೆ ನಡೆಯಲಿದೆ. ನೇಕಾರರು ಮಧ್ಯವರ್ತಿಗಳನ್ನು ನಂಬದೆ ನೇರವಾಗಿ ಜವಳಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಮಾಡಬೇಕು ಎಂದು ತಿಳಿಸಿದ್ದಾರೆ.
**********