ಯಾದಗಿರಿ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪಡಿತರ ಧಾನ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪುತ್ತಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಆಹಾರ ಖಾತೆ ಸಚಿವ ಗೋಪಾಲಯ್ಯ ತಿಳಿಸಿದ್ದಾರೆ.
ಯಾದಗಿರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ನಡೆದ ಯಾದಗಿರಿ ಜಿಲ್ಲೆಯ ಜಿಲ್ಲಾ ಮಟ್ಟದ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು,ಪ್ರತಿ ತಿಂಗಳು ಅನೇಕ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದು,ಅದರಂತೆ ಇಂದು ಯಾದಗಿರಿ ಜಿಲ್ಲೆಗೆ ಆಗಮಿಸಿದ್ದೇನೆ. ಪ್ರಸುತ್ತ ಯಾದಗಿರಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬರುವ ಪಡಿತರ ಧಾನ್ಯಗಳು ಬಡವರಿಗೆ ತಲುಪುತ್ತಿದೆಯೋ ಎಂಬುದರ ಬಗ್ಗೆ ಪರಿಶೀಲನೆ ನಡೆಸಿದ್ದೇನೆ ಎಂದರು.
ಇನ್ನು ಜಿಲ್ಲೆಯ ಡಿಸಿ,ಜಿ.ಪಂ.ಸಿಇಓ,ಎಸಿ, ತಹಶೀಲ್ದಾರ್ ಸೇರಿದಂತೆ ಆಹಾರ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು,ಏಪ್ರಿಲ್‌ನಲ್ಲಿ ಕೊಟ್ಟಿರುವ ಪಡಿತರ ಧಾನ್ಯ ಎಷ್ಟು ಖರ್ಚಾಗಿದೆ.ಮೇ ತಿಂಗಳಿನಲ್ಲಿ ಎಷ್ಟು ಜನರಿಗೆ ಕೊಟ್ಟಿದ್ದೇವೆ ಎಂಬುದಾಗಿ ಮಾಹಿತಿ ಪಡೆದಿದ್ದೇನೆ ಜೊತೆಗೆ ಇವತ್ತಿನಿಂದ ವಿತರಣೆ ಮಾಡಲಾಗುತ್ತಿರುವ ಪಡಿತರ ಧಾನ್ಯಗಳ ಗುಣಮಟ್ಟದ ಬಗ್ಗೆ ಖುದ್ದಾಗಿ ಪರಿಶೀಲನೆ ನಡೆಸಿದ್ದೇನೆ ಎಂದರು.
ಇದಲ್ಲದೆ, ಹಿಂದುಳಿದ ಯಾದಗಿರಿ ಜಿಲ್ಲೆಗೆ ಮಹಾರಾಷ್ಟ್ರ ಹಾಗೂ ಬೆಂಗಳೂರುನಿಂದ ಸಾವಿರಾರು ಜನರು ಇಲ್ಲಿಗೆ ಬಂದಿದ್ದಾರೆ.ಈ ವೇಳೆ ಜಿಲ್ಲಾಡಳಿತ,ಶಾಸಕರು,ಸಂಸದರು ಶಕ್ತಿ ಮೀರಿ ಕೊರೊನಾ ತಡೆಯಲು ಪ್ರಯತ್ನ ಮಾಡಿದ್ದು,ಅವರೆಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದರು.
ಇನ್ನು ಆಹಾರ ಇಲಾಖೆಯಲ್ಲಿ ಕಟ್ಟಕಡೆಯ ಮನುಷ್ಯನಿಗೂ ಆಹಾರ ತಲುಪಬೇಕು ಎಂಬ ಉದ್ದೇಶದಿಂದ ಜಾರಿಗೊಳಿಸಿರುವ ಆತ್ಮನಿರ್ಭಾರ್ ಯೋಜನೆಯಲ್ಲಿ ಹೊರ ಜಿಲ್ಲೆ,ಹೊರ ರಾಜ್ಯಗಳಿಂದ ಬಂದಿರುವ ಹಾಗೂ ಕಾರ್ಡ್ಗಳಿಲ್ಲದವರಿಗೆ 2 ತಿಂಗಳು ತಲಾ 10 ಕೆಜಿ ಅಕ್ಕಿ ಮತ್ತು 2ಕೆಜಿ ಕಡಲೇ ಕಾಳು ಕೊಡಲು ತೀರ್ಮಾನ ಮಾಡಿ,ರಾಜ್ಯದಲ್ಲಿ 40ಲಕ್ಷ ಜನರಿಗೆ ವಿತರಿಸಲು ಕೇಂದ್ರ ಸರ್ಕಾರ ರಾಜ್ಯಕ್ಕೆ ಆಹಾರ ಧಾನ್ಯಗಳನ್ನು ಕಳುಹಿಸಿದೆ ಎಂದು ಮಾಹಿತಿ ನೀಡಿದರು.
ವಿಶೇಷವಾಗಿ ಜಿಲ್ಲೆಯಲ್ಲಿ ಎಲ್ಲಾ ಬಡ ಕುಟುಂಬದವರಿಗೆ ಆಹಾರ ಧ್ಯಾನಗಳನ್ನು ತಲುಪಿಸುವುದು,ಗುಣಮಟ್ಟದ ಆಹಾರವನ್ನು ಸರಿಯಾಗಿ ಸರಬರಾಜು ಮಾಡಲು ಆಗದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು.ದೂರದ ಊರುಗಳಲ್ಲಿ 4-5ಕಿಲೋ ಮೀಟರ್ ದೂರ ಪಡಿತರ ಅಂಗಡಿಗಳು ಇದ್ದರೇ ಆ ಊರುಗಳಿಗೆ ಖುದ್ದಾಗಿ ತೆರಳಿ ಬಡವರಿಗೆ ಆಹಾರ ಧಾನ್ಯ ವಿತರಿಸಲು ಅಧಿಕಾರಿಗಳಿಗೆ ಸೂಚಿಸಿದ ಅವರು ಆ ಊರುಗಳಿಗೆ ಹೊಸ ಅಂಗಡಿ ನೀಡಲು ಪ್ರಸ್ತಾವನೆ ಸಲ್ಲಿಸಿದರೇ ಮುಂದಿನ ದಿನಗಳಲ್ಲಿ ಅದನ್ನು ಮಂಜೂರು ಮಾಡಲಾಗುವುದು ಎಂದರು.
ಇನ್ನು ಪ್ರಧಾನ ಮಂತ್ರಿ ಉಜ್ವಲ ಯೋಜನೆಯಲ್ಲಿ 3 ತಿಂಗಳು ಗ್ಯಾಸ್ ಕೊಟ್ಟಿದ್ದೇವೆ,ಮುಖ್ಯಮಂತ್ರಿ ಅನಿಲ್ ಭಾಗ್ಯ ಯೋಜನೆಯಲ್ಲಿ
3 ತಿಂಗಳು ಉಚಿತ ಗ್ಯಾಸ್ ಕೊಡುತ್ತಿದ್ದು,ಯಾದಗಿರಿ ಜಿಲ್ಲೆಗೆ 2,5೦೦ ಗ್ಯಾಸ್ ಕನೆಕ್ಷನ್ ಹೆಚ್ಚುವರಿಗೆ ಕೊಡಲಾಗಿದ್ದು,ಅದನ್ನು ಬಡವರಿಗೆ ತಲುಪಿಸಲು ವ್ಯವಸ್ಥೆ ಮಾಡಲು ಜಿಲ್ಲಾಡಳಿತಕ್ಕೆ ಸೂಚನೆ ಕೊಟ್ಟಿದ್ದೇನೆ ಎಂದು ಹೇಳಿದರು.
ಇದಲ್ಲದೆ,ಯಾದಗಿರಿ ಜಿಲ್ಲೆಯಲ್ಲಿ ಆಹಾರ ಇಲಾಖೆಯ ಗೋದಾಮು ಕಟ್ಟಲು 5 ಎಕರೆ ಜಾಗ ಕೊಡಲು ಜಿಲ್ಲಾಡಳಿತಕ್ಕೆ ಸಲ್ಲಿಸಲು ಆಹಾರ ಇಲಾಖೆ ಅಧಿಕಾರಿಗಳು ಸಲ್ಲಿಸಲು ಹೇಳಿದ್ದೇನೆ ಎಂದರು.
ಈ ನಡುವೆ ಯಾದಗಿರಿ ಯರಗೋಳ ನ್ಯಾಯ ಬೆಲೆ ಅಂಗಡಿ ಮತ್ತು ಗೋದಾಮುಗಳಿಗೆ ಭೇಟಿ ನೀಡಿದ ಆಹಾರ ಖಾತೆ ಸಚಿವ ಗೋಪಾಲಯ್ಯ ಪಡಿತರದಾರರಿಗೆ ನೀಡುತ್ತಿರುವ ಆಹಾರ ಧಾನ್ಯಗಳ ಗುಣಮಟ್ಟ ವೀಕ್ಷಿಸಿದರು.ಈ ವೇಳೆ ಕಳಪೆ ಮಟ್ಟದ ಬೇಳೆ,ಕಡಲೆ ಕಾಳು ನೋಡಿದ ಸಚಿವರು ಅಧಿಕಾರಿಗಳ ಮೇಲೆ ಗರಂ ಅದರು.
ಅಲ್ಲದೆ, ಈ ಕಳಪೆ ಆಹಾರವನ್ನು ನಿಮ್ಮ ಮನೆಗಳಲ್ಲಿರುವವರಿಗೆ ಕೊಡಿ ಅವರು ತಿನ್ನುತಾರ ನೋಡಿ ಎಂದು ಅಧಿಕಾರಿಗಳನ್ನು ನೇರವಾಗಿ ತರಾಟೆಗೆ ತೆಗೆದುಕೊಂಡರು.ಜೊತೆಗೆ ಯಾವುದೇ ಕಾರಣಕ್ಕೂ ಈ ಕಾಳುಗಳನ್ನು ನೀಡಬೇಡಿ ಹಿಂದಿರುಗಿಸಿ ಎಂದು ಖಡಕ್ ಸೂಚನೆ ನೀಡಿದರು.
**********************