ದೊಡ್ಡಬಳ್ಳಾಪುರ : ಅಯೋದ್ಯೆಯ ವಿವಾದದ ಬಗ್ಗೆ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ರದ್ದು ಮಾಡಿ ಈ ಪ್ರದೇಶವನ್ನು ಪ್ರಾಚೀನ ಬೌದ್ಧ ಸ್ಮಾರಕ ಎಂದು ಘೋಷಣೆ ಮಾಡಿ ಸೂಕ್ತ ರಕ್ಷಣೆ ನೀಡುವಂತೆ ಒತ್ತಾಯಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಪ್ರಜಾವಿಮೋಚನಾ ಚಳವಳಿ (ಸ್ವಾಭಿಮಾನ)ಮೊದಲಾದ ಸಂಘಟನೆಗಳಿಂದ ತಾಲೂಕು ಕಚೇರಿ ಮುಂಭಾಗ ಧರಣಿ ನಡೆಸಿ ತಹಸೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿ ಸಂಘಟನಾ ಸಂಚಾಲಕ ರಾಜು ಸಣ್ಣಕ್ಕಿ, ಶತಮಾನಗಳ ವಿವಾದವಾಗಿದ್ದ ರಾಮ ಜನ್ಮಭೂಮಿ ಮತ್ತು ಬಾಬ್ರಿ ಮಸೀದಿಯ ವ್ಯಾಜ್ಯವನ್ನು ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದೆ. ಆದರೆ ೨,೬೦೦ ವರ್ಷಗಳ ಹಿಂದೆ ಅಯೋದ್ಯೆಯನ್ನು ಸಾಕೇತ ಎಂದು ಕರೆಯಲಾಗುತ್ತಿತ್ತು. ವಿಹಾರ ದ್ವಂಸಮಾಡಿದ ಬಾಬರ್ ಅಲ್ಲಿಯೇ ಬಾಬರಿ ಮಸೀದಿ ನಿರ್ಮಿಸಿದ. ಅಕ್ಬರನ ಆಡಳಿತದಲ್ಲಿ ಬಾಬರಿ ಮಸೀದಿಯನ್ನು ನವೀಕರಣಗೊಳಿಸಿ ಹಿಂದು ಮುಸ್ಲಿಂ ಬಾವೈಕ್ಯತೆಯ ಸಂಕೇತವಾಗಿ ಅದರಲ್ಲಿ ಹಿಂದು-ಮುಸ್ಲಿಂ ಧರ್ಮದ ಧಾರ್ಮಿಕ ಚಿನ್ಹೆಗಳನ್ನು ಅಳವಡಿಸಿದ ಎಂದು ಇತಿಹಾಸ ಹೇಳುತ್ತಿದೆ. ಇದಕ್ಕೆ ಪೂರಕವಾಗಿ ಯುನೆಸ್ಕೋ ವತಿಯಿಂದ ನಡೆಸಿದ ಪ್ರಾಚ್ಯವಸ್ತು ಸಂಶೋಧನೆಯಲ್ಲಿ ಬಾಬಾರಿ ಮಸೀದಿ ಸ್ಥಳದಲ್ಲಿ ಹಿಂದು-ಮುಸ್ಲಿಂ ಧರ್ಮದ ಧಾರ್ಮಿಕ ಚಿನ್ಹೆಗಳು ತದ ನಂತರ ಬೌದ್ಧಧಮ್ಮದ ಶಿಲ್ಪಕಲೆಗಳು ಪತ್ತೆಯಾಗಿವೆ ಎಂದು ಇಂಡಿಯಾ ಟುಡೆ ಪತ್ರಿಕೆ ತನ್ನ ವರದಿಯಲ್ಲಿ ಪ್ರಕಟಿಸಿದೆ. ಇತ್ತೀಚೆಗೆ ಬಾಬಿರಿ ಮಸೀದಿ ಅಡಿಯಲ್ಲಿ ಕಾಮಗಾರಿ ಮಾಡುವಾಗ ಹಲವಾರು ಬೌದ್ಧ ಸ್ಥೂಪಗಳು, ಬದ್ಧನ ಮೂರ್ತಿಗಳು ಸೇರಿದಂತೆ ಬೌದ್ಧ ದರ್ಮದ ನೂರಾರು ಚಿಹ್ನೆಗಳು ದೊರೆತಿದೆ. ಜಗತ್ತಿಗೆ ಭಾರತ ಬುದ್ಧನ ಮೂಲಕ ಪರಿಚಯವಾಗಿದೆ, ಬುದ್ಧನ ಪಂಚಶೀಲಗಳು ಮಧ್ಯಮ ಮಾರ್ಗ ಜಗತ್ತಿಗೆ ಜ್ಞಾನದ ಬೆಳಕು ನೀಡಿದ್ದು, ನಮ್ಮ ಸಂವಿಧಾನದಲ್ಲೂ ಸಹ ಬೌದ್ಧ ದಮ್ಮದ ಲಾಂಚನಗಳು ರಾಷ್ಟ್ರೀಯ ಚಿನ್ಹೆಗಳಾಗಿ ಸೇರಿಸಲಾಗಿದೆ. ಈ ನಿಟ್ಟಿನಲ್ಲಿ ಸುಮಾರು ಎರಡೂವರೆ ಸಾವಿರ ವರ್ಷಗಳ ಇತಿಹಾಸವಿರುವ ಈ ವಿಹಾರವನ್ನು ಪ್ರಾಚೀನ ಬೌದ್ಧ ಸ್ಮಾರಕ ಎಂದು ಘೋಷಣೆ ಮಾಡಿ ಸೂಕ್ತ ರಕ್ಷಣೆ ನೀಡಬೇಕೆಂದು ಈ ಮೂಲಕ ಒತ್ತಾಯಿಸಲಾಗುತ್ತದೆ ಎಂದರು.
ಈ ವೇಳೆ ಬುದ್ಧವಿಹಾರ ಎಜುಕೇಷನ್ ಅಂಡ್ ಸರ್ವೀಸೇಬಲ್ ಟ್ರಸ್ಟ್ ಅಧ್ಯಕ್ಷ ಎಂ. ಮಾಳವ ನಾರಾಯಣ, ಪ್ರಜಾವಿಮೋಚನಾ ಚಳವಳಿ (ಸ್ವಾಭಿಮಾನ) ಜಿ ಅದ್ಯಕ್ಷ ಹನುಮಣ್ಣ ಗೂಳ್ಯ, ಮುಖಂಡರಾದ ಎಂ.ಮುನಿಕೃಷ್ಣಪ್ಪ , ಸುರೇಶ್ ತಳಗವಾರ, ನರಸಿಂಹಮೂರ್ತಿ, ರತ್ನಮ್ಮ ಮೊದಲಾದವರು ಭಾಗವಹಿಸಿದ್ದರು.