ದೊಡ್ಡಬಳ್ಳಾಪುರ : ನೇಕಾರರ ವಿದ್ಯುತ್ ಶುಲ್ಕ ಸಂಪೂರ್ಣ ಮನ್ನಾ ಮಾಡಲು ಒತ್ತಾಯಿಸಿ ಹಾಗೂ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಹೊರಟಿರುವ ರಾಜ್ಯ ಮತ್ತು ಕೇಂದ್ರ ನೀತಿ ಖಂಡಿಸಿ ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿ ವತಿಯಿಂದ ನಗರದ ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿ ನಗರ ಘಟಕದ ಅಧ್ಯಕ್ಷ ಪಿ.ಎ.ವೆಂಕಟೇಶ್, ಉಪಾಧ್ಯಕ್ಷ ಆರ್.ಎಸ್.ಶ್ರೀನಿವಾಸ್, ಲಾಕ್ಡೌನ್ ಸಂದರ್ಭದಲ್ಲಿ ಸ್ಥಗಿತವಾಗಿರುವ ನೇಕಾರಿಕೆ ಉದ್ಯಮ ಇನ್ನು ಆರಂಭವೇ ಆಗಿಲ್ಲ. ಇಂತಹ ಸಂದರ್ಭದಲ್ಲಿ ಬೆಸ್ಕಾಂ ಸಿಬ್ಬಂದಿ ತಮಗೆ ಇಷ್ಟ ಬಂದಷ್ಟು ವಿದ್ಯುತ್ ಬಿಲ್ ಬರೆದುಕೊಂಡು ಹೋಗಿದ್ದಾರೆ.ಈಗ ನೋಡಿದರೆ ಬಿಲ್ ಪಾವತಿ ಮಾಡದಿದ್ದರೆ ವಿದ್ಯುತ್ ಸಂಪರ್ಕವನ್ನು ಕಡಿತಮಾಡುವ ಎಚ್ಚರಿಕೆ ನೀಡುತಿದ್ದಾರೆ. ಇಲ್ಲಿಯವರೆಗೂ ವಿದ್ಯುತ್ ಮಗ್ಗಗಳಿಗೆ ರಿಯಾಯಿತಿ ದೊರೆಯುತಿತ್ತು.ಪ್ರಸ್ತಾವಿತ ವಿದ್ಯುತ್ ಕಾಯ್ದೆ ತಿದ್ದುಪಡಿಯಿಂದಾಗಿ ವಿದ್ಯುತ್ ಕ್ಷೇತ್ರ ಖಾಸಗಿಯವರ ಪಾಲಾಗಿ ನೇಕಾರರ ಬದುಕು ಮತ್ತಷ್ಟು ಕಷ್ಟವಾಗಲಿದೆ. ವಿದ್ಯುತ್ ರಿಯಾಯಿತಿ ಕೈತಪ್ಪಲಿದೆ. ನೇಕಾರಿಕೆ ಉದ್ಯಮ ಉತ್ತಮಗೊಳ್ಳುವವರೆಗೂ ಗೃಹಬಳಕೆ ಹಾಗೂ ಮಗ್ಗಕ್ಕೆ ಬಳಸುವ ವಿದ್ಯುತ್ ಶುಲ್ಕ ಮನ್ನಾ ಮಾಡಬೇಕು.ನಂತರ ನೇಕಾರರಿಗೆ ಉಚಿತ ವಿದ್ಯುತ್ ಹಾಗೂ ನಿರಂತರ ವಿದ್ಯುತ್ ಸೌಲಭ್ಯ ನೀಡಬೇಕಿದೆ. ವಿದ್ಯುತ್ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ನೀಡಬಾರದು. ನೇಕಾರರು ನೇಯ್ದ ಬಟ್ಟೆ ಮಾರಾಟವಾಗದೇ ದಿವಾಳಿಯಾಗಿ ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ನೇಕಾರರಿಗೆ 10 ಲಕ್ಷ ರೂ ಪರಿಹಾರವನ್ನು ಸರ್ಕಾರ ನೀಡಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ಬೆಸ್ಕಾಂ ಕಾರ್ಯಪಾಲಕ ಅಭಿಯಂತರ ಗಂಗರಾಜು ವಿದ್ಯುತ್ ಬಿಲ್ಗಳಲ್ಲಿ ಆಗಿರುವ ವ್ಯತ್ಯಾಸವನ್ನು ಸರಿಪಡಿಸಿ, ಬಿಲ್ ಮೊತ್ತ ಹಚ್ಚಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ವಿದ್ಯುತ್ ಶುಲ್ಕ ಮನ್ನಾ ಮಾಡುವುದು ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಬೇಕಿದ್ದು, ನೇಕಾರರ ಸಮಸ್ಯೆಗಳನ್ನು ಸಂಬಂಧಪಟ್ಟವರ ಗಮನಕ್ಕೆ ತರಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಅಶೋಕ್,ಸಹ ಕಾರ್ಯದರ್ಶಿ ಎಂ.ಮುನಿರಾಜು, ಖಜಾಂಚಿ ಕೆ.ಮಶ್, ಸಹಕಾರ್ಯದರ್ಶಿಗಳಾದ ಈಶ್ವರ್, ಕೆ.ರಘುಕುಮಾರ್, ಸಿ.ಅಶ್ವತ್ಥ್, ಚೌಡಯ್ಯ,ಆದಿರಾಯಣರೆಡ್ಡಿ, ಸಂಚಾಲಕರಾದ ಸುರೇಶ್, ರಾಮಣ್ಣ, ಉಪಾಧ್ಯಕ್ಷರಾದ ಎಂ.ರಾಮಚಂದ್ರ, ರಾಮಾಂಜಿನಪ್ಪ, ರಾಜಶೇಖರ್, ಸುರೇಶ್, ಚೌಡಪ್ಪ, ಕನ್ನಡ ಪಕ್ಷದ ಅಧ್ಯಕ್ಷ ಎಂ.ಸಂಜೀವ್ ನಾಯಕ್, ಪ್ರಧಾನ ಕಾರ್ಯದರ್ಶಿ ಡಿ.ಪಿ.ಆಂಜನೇಯ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಆರ್.ಚಂದ್ರತೇಜಸ್ವಿ, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ಭಾಗವಹಿಸಿದ್ದರು.