Site icon Harithalekhani

ನೀರಿನ ಸಂರಕ್ಷಣೆಗೆ ಅಟಲ್ ಭೂಜಲ ಸೂಕ್ತ ಯೋಜನೆ: ಎನ್.ಎಂ.ನಾಗರಾಜ

ದೊಡ್ಡಬಳ್ಳಾಪುರ: ಗ್ರಾಮೀಣ ಭಾಗದ ಜನರಿಗೆ ಅಗತ್ಯ ನೀರು ಒದಗಿಸುವ ಮಹತ್ವದ ಅಟಲ್ ಭೂಜಲ ಯೋಜನೆ ಭವಿಷ್ಯದಲ್ಲಿ ನೀರಿನ ಸಂರಕ್ಷಣೆಗೆ  ಸೂಕ್ತವಾದ ಯೋಜನೆಯಾಗಲಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಎಂ.ನಾಗರಾಜ ಹೇಳಿದರು.

ಇಂದು ಬೀರಸಂದ್ರ ಗ್ರಾಮದ, ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯತಿ ಕಚೇರಿ ಸಭಾಂಗಣದಲ್ಲಿ ನಡೆದ ಅಟಲ್ ಭೂಜಲ ಯೋಜನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಟಲ್ ಭೂಜಲ ಯೋಜನೆ ಅನುಷ್ಠಾನಗೊಳಿಸಲು ಕ್ರಿಯಾಯೋಜನೆಯನ್ನು ಶೀಘ್ರ  ಸಿದ್ಧಪಡಿಸಬೇಕು. ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಅಟಲ್ ಭೂಜಲ ಯೋಜನೆ ಅನುಷ್ಠಾನಕ್ಕೆ ಆಯ್ಕೆ ಮಾಡಿರುವ ಹಿನ್ನೆಲೆ ಜಿಲ್ಲೆಯ ಎಲ್ಲಾ ನಾಲ್ಕು ತಾಲ್ಲೂಕುಗಳು ಈ ಯೋಜನೆಯ ಪ್ರಯೋಜನ ಪಡೆಯಲಿದೆ. ಪ್ರದೇಶವಾರು ಅಂತರ್ಜಲ ಕುರಿತ ಮಾಹಿತಿ ಹಾಗೂ ಅಗತ್ಯ ದತ್ತಾಂಶಗಳನ್ನು ಅಧಿಕಾರಿಗಳು ಕಲೆಹಾಕಬೇಕು ಎಂದು ತಿಳಿಸಿದರು. 

ಜಿಲ್ಲೆಯ 105 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ,  ಅಲ್ಪಪ್ರಮಾಣದಲ್ಲಿ ನೀರು ಸಿಗುತ್ತಿರುವ ಕೊಳವೆ ಬಾವಿಗಳನ್ನು ಅಧ್ಯಯನ ಕೊಳವೆಬಾವಿಗಳನ್ನಾಗಿ ಮಾರ್ಪಡಿಸಬೇಕು ಹಾಗೂ ಹೊಸ ಕೊಳವೆಬಾವಿಗಳನ್ನು ಕೊರೆಯಲು ಅಧಿಕಾರಿಗಳು ಸ್ಥಳ ಸಮೀಕ್ಷೆ ನಡೆಸಬೇಕು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪ‌ ಕಾರ್ಯದರ್ಶಿ ಕೆ.ಕರಿಯಪ್ಪ, ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಮುರುಳೀಧರ್, ಕೃಷಿ ಇಲಾಖೆಯ ಉಪನಿರ್ದೇಶಕಿ ವಿನುತ ಸೇರಿದಂತೆ ಜಿಲ್ಲಾ ಮಟ್ಟದ  ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version