Site icon Harithalekhani

ನೇಕಾರರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನೇಕಾರರ ಹೋರಾಟ ಸಮಿತಿ ವತಿಯಿಂದ ಧರಣಿ

ದೊಡ್ಡಬಳ್ಳಾಪುರ: ನೇಕಾರರ
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ನಗರದ ಜಿಲ್ಲಾ ಜವಳಿ ಇಲಾಖೆ ಕಚೇರಿ ಮುಂದೆ
ನೇಕಾರರ ಹೋರಾಟ ಸಮಿತಿ ವತಿಯಿಂದ ಧರಣಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಟಿ.ವೆಂಕಟರಮಣಯ್ಯ,ಲಾಕ್‌ಡೌನ್‌ನಿಂದಾಗಿ
ಸಂಕಷ್ಟಕ್ಕೆ ಸಿಲುಕಿರುವ ನೇಕಾರರಿಗೆ ಆರ್ಥಿಕ ನೆರವು ಸೇರಿದಂತೆ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು
ಮುಖ್ಯಮಂತ್ರಿಗಳು ಹಾಗೂ ಜವಳಿ ಸಚಿವರಿಗೆ ಸಲ್ಲಿಸಲಾಗಿತ್ತು. ಆದರೆ ನಾವು ಸಲ್ಲಿಸಿರುವ ಮನವಿಯಲ್ಲಿದ್ದ
ಯಾವುದೇ ಬೇಡಿಕೆ ಬಗ್ಗೆಯು ರಾಜ್ಯ ಸರ್ಕಾರ ಗಮನವನ್ನೇ ನೀಡಿಲ್ಲ. ನೇಕಾರರಿಗೆ 2 ಸಾವಿರ ರೂಪಾಯಿ ಪರಿಹಾರ
ನೀಡಲು ರೂಪಿಸಲಾಗಿರುವ ನಿಯಮಗಳು ಸಹ ಅವೈಜ್ಞಾನಿಕವಾಗಿವೆ. ಈಗಿನ ನಿಯಮಗಳ ಪ್ರಕಾರ ಯಾರೊಬ್ಬ ನೇಕಾರರಿಗೂ
ಸರ್ಕಾರದ ಪರಿಹಾರ ದೊರೆಯಲು ಸಾಧ್ಯವೇ ಇಲ್ಲ. ನೇಕಾರರಿಗೆ ಸೌಲಭ್ಯ ದೊರೆಯಲು ಸಂಘಟಿತ ಹೋರಾಟ ರೂಪಿಸುವ
ಅಗತ್ಯವಿದೆ ಎಂದರು.

ನೇಕಾರರ ಹೋರಾಟ ಸಮಿತಿ ಅಧ್ಯಕ್ಷ ಬಿ.ಜಿ.ಹೇಮಂತರಾಜು ಮಾತನಾಡಿ, ಕೋವಿಡ್-19 ಲಾಕ್‌ಡೌನ್‌
ಹಿನ್ನೆಲೆಯಲ್ಲಿ  ದೇಶಾದ್ಯಂತ  ವಾಣಿಜ್ಯ ಮತ್ತು ಕೈಗಾರಿಕೆಗಳು ನಿಂತಿವೆ.
ರಾಜ್ಯಾದ್ಯಂತ ನೇಯ್ಗೆ ಉದ್ಯಮ ಸಂಪೂರ್ಣ ಸ್ಥಗಿತವಾಗಿದೆ. ಇವು ಸಹಜ ಸ್ಥಿತಿಗೆ ಬರಲು ತಿಂಗಳುಗಳೇ ಬೇಕಾಗಲಿದೆ.
ಸರ್ಕಾರ  ನೇಕಾರರ ಬಳಿ ದಾಸ್ತಾನಿರುವ ಸೀರೆಗಳನ್ನು ಖರೀದಿ ಮಾಡಬೇಕು. ನೇಕಾರ ಕಾರ್ಮಿಕರನ್ನು
ಅಸಂಘಟಿತ ಕಾರ್ಮಿಕರ ಪಟ್ಟಿಗೆ ಸೇರಿಸಬೇಕು. ನೇಕಾರರಿಗೆ ದುಡಿಮೆ ಬಂಡವಾಳಕ್ಕೆ ಬಡ್ಡಿರಹಿತ ಸಾಲ ನೀಡಬೇಕು.
ನೇಕಾರರ ಕೂಲಿ ಕಾರ್ಮಿಕರು ಮತ್ತು ನೇಕಾರರಿಗೆ ಸರ್ಕಾರದ ಜವಳಿ ಇಲಾಖೆಯಿಂದ ಗುರುತಿನ ಚೀಟಿ ನೀಡಬೇಕು.ಆಂಧ್ರ,ತಮಿಳುನಾಡು
ಮಾದರಿಯಲ್ಲಿ ನೇಕಾರರು ಸೇರಿದಂತೆ ನೇಕಾರಿಕೆ ಪೂರ್ವ ಕೆಲಸಗಳಲ್ಲಿ ತೊಡಗಿಸಿಕೊಂಡಿರುವವರಿಗೂ ಆರ್ಥಿಕ
ಸಹಾಯ ನೀಡಬೇಕು. ಸರ್ಕಾರ ನೇಕಾರರ ಬೇಡಿಕೆಯನ್ನು ಈಡೇರಿಸದೇ ಇದ್ದರೆ ರಾಜ್ಯ ಮಟ್ಟದಲ್ಲಿ ಹೋರಾಟ ಆರಂಭಿಸಲಾಗುವುದು
ಎಂದರು.

ಧರಣಿಯಲ್ಲಿ ನೇಕಾರರ ಹೋರಾಟ ಸಮಿತಿ ಉಪಾಧ್ಯಕ್ಷ ಕೆ.ಜಿ.ಗೋಪಾಲ್, ಶಿವರಾಂ,ನಾರಾಯಣಪ್ಪ,

ಕಾರ್ಯದರ್ಶಿ ಎನ್.ಲೋಕೇಶ್,ಸೂರ್ಯಪ್ರಕಾಶ,ರಂಗಸ್ವಾಮಿ,ನಾಗಭೂಷಣ, ಪ್ರಭಾಕರ್
ಇದ್ದರು.

Exit mobile version