ದೊಡ್ಡಬಳ್ಳಾಪುರ: ಕರೊನಾ ವೈರಸ್ ಸೋಂಕು ಗ್ರಾಮಗಳಿಗೆ ಹರಡದಂತೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಆಶಾ ಕಾರ್ಯಕರ್ತೆಯರ ಕೆಲಸ ಶ್ಲಾಘನೀಯವಾಗಿದೆ ಎಂದು ಸಹಕಾರ ಸಚಿವ ಎಸ್. ಟಿ.ಸೋಮಶೇಖರ್ ಹೇಳಿದರು.
ಅವರು ನಗರದ ಡಾ.ಬಾಬು ಜಗಜೀವನ್ರಾಂ ಭವನದಲ್ಲಿ ಶನಿವಾರ ಬಮೂಲ್ ನಿಂದ ಆಶಾ ಕಾರ್ಯಕರ್ತೆಯರಿಗೆ ಸಹಾಯದನ ಚೆಕ್ ವಿತರಿಸಿ ಮಾತನಾಡಿದರು.
ರಾಜ್ಯದಲ್ಲಿ ಕರೊನಾ ವೈರಸ್ ಸೋಂಕಿತರ ಸಂಖ್ಯೆ ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕಡಿಮೆಯೇ ಇತ್ತು. ಆದರೆ ಹೊರ ರಾಜ್ಯಗಳಿಂದ ಬಂದಿರುವ ಕಾರ್ಮಿಕರು ಸೇರಿದಂತೆ ಇತರೆ ಜನರಿಂದಾಗಿಯೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಗ್ರಾಮಗಳಿಗೆ ಯಾರೇ ಹೊರಗಿನಿಂದ ಬಂದರು ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರಂಟೈನಲ್ಲಿ ಇರುವಂತೆ ತಿಳಿಸಿ. ಅಕ್ರಮವಾಗಿ ಗ್ರಾಮಗಳಿಗೆ ಬರುವವರ ಮೇಲೆ ಸದಾ ನಿಗವಹಿಸಬೇಕು. ಮೇ.18ರ ನಂತರ ರಾಜ್ಯದಲ್ಲಿ ಕಂಡು ಬಂದಿರುವ ಕರೊನಾ ಪ್ರಕರಣಗಳು ಕ್ವಾರಂಟೈನಲ್ಲಿ ಇದ್ದವರಲ್ಲಿಯೇ ಕಂಡು ಬಂದಿದೆ. ಹೀಗಾಗಿ ಸಾರ್ವಜನಿಕರು ಆತಂಕಪಡುವ ಅಗತ್ಯ ಇಲ್ಲ. ಆದರೆ ಅನಾವಶ್ಯಕವಾಗಿ ಹೊರಗೆ ತಿರುಗಾಡುವುದನ್ನು ಕಡಿಮೆ ಮಾಡಬೇಕು. ಸರ್ಕಾರಿ ಕಚೇರಿಗಳು, ಮಾರುಕಟ್ಟೆ ಪ್ರದೇಶಗಳು ಸೇರಿದಂತೆ ಎಲ್ಲಾ ಕಡೆಯಲ್ಲೂ ಅಂತರವನ್ನು ಕಾಪಾಡುವುದು, ಮಾಸ್ಕ್ ಧರಿಸುವುದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಬಮೂಲ್ ಹಾಗೂ ಕೆಎಂಎಫ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಕರೊನಾ ವೈರಸ್ ಸೋಂಕು ಹರಡದಂತೆ ಆಶಾ ಕಾರ್ಯಕರ್ತೆಯರು ವಹಿಸಿದ ಎಚ್ಚರವೇ ರೈತರು ನೆಮ್ಮದಿಯಾಗಿ ಇರಲು ಮತ್ತು ಹಾಲು ಉತ್ಪಾದನೆಯು ಕುಸಿತವಾಗದಂತೆ ನಡೆಯಲು ಕಾರಣವಾಗಿದೆ. ಹೀಗಾಗಿ ಬಮೂಲ್ ವತಿಯಿಂದ ಪ್ರತಿಯೊಬ್ಬ ಆಶಾ ಕಾರ್ಯಕರ್ತೆಯರಿಗೆ ರೂ 3,000 ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಟಿ.ವೆಂಕಟರಮಣಯ್ಯ ವಹಿಸಿದ್ದರು. ಸಂಸತ್ ಸದಸ್ಯ ಡಿ.ಕೆ.ಸುರೇಶ್, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ,ಬಮೂಲ್ ವ್ಯವಸ್ಥಾಪಕ ಡಾ.ಕೆ.ಸ್ವಾಮಿ, ನಿರ್ದೇಶಕ ಹರೀಶ್ ಕುಮಾರ್,ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ.ಸಿ.ಶಶಿಧರ್, ಮುಖಂಡರಾದ ಬಿ.ಎಚ್.ಕೆಂಪಣ್ಣ ಮತ್ತಿತರರಿದ್ದರು.