ಮುಖ್ಯಾಂಶಗಳು
ಕರೊನಾ ಸಂಕಷ್ಟದಲ್ಲಿ ದುಡ್ಡು ಮಾಡುವ ದುರಾಸೆಗಿಳಿದ ಆಸೆ ಬುರುಕ ವ್ಯಾಪಾರಿಗಳು.
ಸಾಮಗ್ರಿಗಳ ಕೊರತೆ ಇದೆ ಎಂಬ ನೆಪ / ಚಿತೆಯಲ್ಲಿ ಬೀಡಿ ಅಂಟಿಸಿಕೊಳ್ಳುವ ದುರಾಲೋಚನೆ
ಅನಿವಾರ್ಯವಾಗಿ ಖರೀದಿಸಬೇಕಾದ ಜನತೆಯಿಂದ ಹಿಡಿ ಶಾಪ
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿ ಬಡವರು
ದೊಡ್ಡಬಳ್ಳಾಪುರ : ಕರೊನಾ ಸೋಂಕಿನ ಹಿನ್ನಲೆ ಘೋಷಿಸಲಾದ ಲಾಕ್ ಡೌನ್ ಕಾರಣ ತರಕಾರಿ-ದಿನಸಿ ಸಾಮಗ್ರಿಗಳ ಬೆಲೆ ಹೆಚ್ಚಳದಿಂದ ಜನ ಪರಿತಪಿಸುವಂತಾಗಿದೆ.
ತರಕಾರಿ ಹಾಗೂ ದಿನಸಿ ಸಾಮಗ್ರಿಗಳ ಕೊರತೆ ಇದೆ ಎಂಬ ನೆಪದಲ್ಲಿ ಮಾರಾಟಗಾರರು ಹಣ್ಣು,ತರಕಾರಿ, ಪಲ್ಯ, ದಿನಸಿ,ಕೋಳಿ ಸಾಮಗ್ರಿಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಲು ಮುಂದಾಗಿದ್ದಾರೆ.ಅನಿವಾರ್ಯವಾಗಿ ಜನರು ಹೆಚ್ಚಿನ ದರ ನೀಡಿ ಖರೀದಿಸಬೇಕಾದ ಸ್ಥಿತಿ ನಿರ್ಮಾಣಗೊಂಡಿದ್ದು,ಒಂದೆಡೆ ಕರೊನಾ ಹಾಗೂ ಇನ್ನೊಂದೆಡೆ ಮಾನವೀಯತೆ ಮರೆತು ದರ ಹೆಚ್ಚಳ ಮಾಡಿರುವ ವ್ಯಾಪಾರಸ್ಥರಿಗೆ ಜನ ಹಿಡಿಶಾಪ ಹಾಕತೊಡಗಿದ್ದಾರೆ.
5 – 15 ರೂ. ಬೆಲೆ ಏರಿಕೆ : ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳು ನಿರೀಕ್ಷಿತ ಮಟ್ಟದಲ್ಲಿ ಮಾರುಕಟ್ಟೆಗೆ ಬರುತ್ತಿಲ್ಲ ಎಂಬ ನೆಪವೊಡ್ಡಿ ಸಗಟು ಮಾರಾಟಗಾರ 1ರೂ ಬೆಲೆ ಏರಿಕೆ ಮಾಡಿದರೆ.ಚಿಲ್ಲರೆ ಮಾರಾಟಗಾರರು 5 ರಿಂದ 10ರೂ ಬೆಲೆ ಏರಿಕೆ ಮಾಡಿ ಜನತೆ ಸಂಕಷ್ಟದಲ್ಲಿ ಬಸವಳಿಯುತ್ತಿದ್ದರೆ,ಇಂತಹ ಸಂದರ್ಭದಲ್ಲಿ ಮಾನವೀಯತೆ ಮರೆತು ದುಡ್ಡು ಮಾಡುವ ದಂದೆಗಿಳಿದಿದ್ದಾರೆ.
ಪ್ರಸ್ತುತ ಪ್ರತಿ ಕೆಜಿಗೆ ಸಕ್ಕರೆ 4-5ರೂ,ತೊಗರಿ ಬೇಳೆ 4-8 ರೂ, ಎಣ್ಣೆ 10-15 ರೂ, ರವಾ-ಅಕ್ಕಿ ಸೇರಿದಂತೆ ಎಲ್ಲವೂ ಕೆಜಿಗೆ 5 ರಿಂದ 15 ರೂ. ಗಳವರೆಗೆ ಏರಿಕೆ ಕಂಡಿವೆ. ಇನ್ನು ತರಕಾರಿಯೂ ತುಟ್ಟಿಯಾಗಿದ್ದು, ಹಣ್ಣುಗಳ ಬೆಲೆ ದುಪ್ಪಟ್ಟಾಗಿದೆ. ಕಿತ್ತಳೆ 80 ರೂ. ಕೆಜಿ, ದ್ರಾಕ್ಷಿ 80-100 ರೂ.ಗಳು, ಕರಬೂಜ 50 ರೂ. ಗಳಿಗೆ ಒಂದು, ಕಲ್ಲಂಗಡಿ ಸಣ್ಣದು 50ರೂ. ಹಾಗೂ ದೊಡ್ಡದು 80-100 ರೂ., ಸೇಬು 80-150 ರೂ.ಗಳು, ಯಾಲಕ್ಕಿ ಬಾಳೆ ಕೆಜಿ 60 ರೂ.ಗಳಿಗೆ ಮಾರಾಟವಾಗ್ತಿವೆ.
ಸಿಗರೇಟ್ ಮಾರಾಟದಲ್ಲಿ ಸುಲಿಗೆ
ಆಹಾರ ಪದಾರ್ಥ,ಮತ್ತೊಂದೆಡೆ ಮದ್ಯ ಮಾರಾಟದಲ್ಲಿ ಬೆಲೆ ಏರಿಕೆಯಾದರೆ ಅಲ್ಲೊಂದು ಆಕ್ರಂದನ ಯಾರಿಗೂ ಕೇಳಿಸದಾಗಿದೆ.ಲಾಕ್ ಡೌನ್ ಆರಂಭವಾದಾಗಿನಿಂದ ಧೂಮಪಾನಿಗಳ ಜೇಬನ್ನು ಹಾಡು ಹಗಲೆ ಕತ್ತರಿ ಹಾಕುತ್ತಿರುವ ಸಿಗರೇಟ್ ಮಾರಾಟಗಾರರು.10 ರ ಬೆಲೆಗೆ 20,16ರ ಬೆಲೆಯ ಸಿಗರೇಟಿಗೆ 30ರೂಗೆ ಮಾರುವ ಮೂಲಕ ರಾಜಾರೋಶವಾಗಿ ಹಗಲು ಸುಲಿಯನ್ನು ನಡೆಸುತ್ತಿದ್ದರು ಧೂಮಪಾನಿಗಳು ಮಾತ್ರ ಯಾರಿಗೂ ಹೇಳಲಾಗದೆ ಮೌನ ವ್ಯಥೆ ಪಡುತ್ತಿದ್ದಾರೆ.
ಇಡೀ ದೇಶವೇ ಸಂಕಷ್ಟದಲ್ಲಿರುವಾಗ.ಚಿತೆಯಲ್ಲಿ ಬೀಡಿ ಅಂಟಿಸಿಕೊಳ್ಳುವ ದುರಾಲೋಚನೆಗೆ ಇಳಿದಿರುವ ವ್ಯಾಪಾರಿಗಳಿಗೆ ಜನರ ಶಾಪ ತಟ್ಟದೇ ಇರುವುದೆ…?
ನುಂಗಲಾರದ ತುತ್ತಾಗಿದೆ.
ಕರೊನಾ ಸೋಂಕು ತಡೆಗೆ ಹೋರಾಟ ನಡೆಸುತ್ತಿರುವಾಗಲೇ ಬೆಲೆ ಏರಿಕೆ ಎನ್ನುವುದು ಸಾರ್ವಜನಿಕರನ್ನು ಬಾಧಿಸತೊಡಗಿದೆ. ಏನೇ ಖರೀದಿಸಲು ಹೋದರೂ ಈ ಹಿಂದಿಗಿಂತಲೂ ಹೆಚ್ಚಿನ ಬೆಲೆ ನೀಡಿ ಖರೀದಿಸಬೇಕಾಗಿದೆ. ಸಂಬಂಧಪಟ್ಟವರು ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕು – ರಾಜ್‌ವಡ್ಡಳ್ಳಿ,ಸಾರ್ವಜನಿಕ,ದೊಡ್ಡಬಳ್ಳಾಪುರ
ಸಾರಿಗೆ ವೆಚ್ಚ ಹೆಚ್ಚು.
ಎಲ್ಲೆಡೆ ಲಾಕ್‌ಡೌನ್ ಆಗಿರುವುದರಿಂದ ಸಂಚಾರ ಅಸ್ತವ್ಯಸ್ತವಾಗಿದ್ದು, ವಾಹನಗಳ ಓಡಾಟ ಇಲ್ಲವಾಗಿದೆ. ಇದರಿಂದ ಇರುವಷ್ಟು ದಾಸ್ತಾನು ಖಾಲಿ ಮಾಡಲಾಗುತ್ತಿದ್ದು, ಜೊತೆಯಲ್ಲಿಯೇ ಎಪಿಎಂಸಿಯಿಂದ ದಾಸ್ತಾನು ತರಿಸಿಕೊಳ್ಳಬೇಕು. ಇದಕ್ಕಾಗಿ ಸಣ್ಣ ವಾಹನದ ಮೊರೆ ಹೋಗುತ್ತಿದ್ದು, ಅವರು ಬಾಡಿಗೆ ದರವನ್ನು ಏರಿಸಿದ್ದಾರೆ. ಒಂದು ಟನ್‌ಗೆ ಸುಮಾರು 50-100 ರೂ.ಗಳವರೆಗೆ ಏರಿಕೆ ಮಾಡಿದ್ದು, ಇದರಿಂದ ಅನಿವಾರ್ಯವಾಗಿ ಬೆಲೆ ಏರಿಕೆಯಾಗುತ್ತಿದೆ. ಇದು ಕೂಡಾ ಗ್ರಾಹಕರ ಮೇಲೆ ಬೀಳುತ್ತಿದೆ – ಹೆಸರು ಹೇಳಲಿಚ್ಛಿಸದ ವ್ಯಾಪಾರಿ