ದೊಡ್ಡಬಳ್ಳಾಪುರ: ಲಾಕ್‌ಡೌನ್ ನಂತರ ತೀವ್ರ ಸಂಕಷ್ಟಕ್ಕೆ ಸಿಲುಕಿರುವುದು ಪುಪ್ಪೋದ್ಯಮ. ಈ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ರೈತರಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರಿನ ಬ್ಯಾಟರಾಯನಪುರ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಸ್ಥಳಾವಕಾಶ ಕಲ್ಪಿಸಲಾಗಿದೆ ಎಂದು ಕೃಷಿ ಮಾರಾಟ ಇಲಾಖೆ ನಿರ್ದೇಶಕ ಸಿ.ಎಸ್.ಕರೀಗೌಡ ಹೇಳಿದರು.
ತಾಲ್ಲೂಕಿನ ಹೂವು ಬೆಳೆಗಾರರ ತೋಟಗಳಿಗೆ ಶುಕ್ರವಾರ ಭೇಟಿ ನೀಡಿದ್ದ ಅವರು ಹೂವು ಬೆಳೆಗಾರರಿಂದ ಮನವಿ ಸ್ವೀಕರಿಸಿ ಮಾತನಾಡಿದರು.
ಹಣ್ಣು, ತರಕಾರಿ ಮಾರಾಟಕ್ಕೆ ಎಪಿಎಂಸಿಗಳಲ್ಲಿ ರೈತರಿಗೆ ಸಾಕಷ್ಟು ಸೌಲಭ್ಯಗಳನ್ನು ಕಲ್ಪಿಸಿ ಮಾರಾಟಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಹಾಗೂ ಹೊರಗಿನಿಂದಲು ಸಹ ವ್ಯಾಪಾರಸ್ತರು ಬಂದು ಹೋಗಲು ಅನುಕೂಲಗಳನ್ನು ಮಾಡಿಕೊಡಲಾಗಿದೆ. ಸಾಮಾನ್ಯ ಸ್ಥಿತಿಯಲ್ಲಿ ರೈತರು ಬೇಳೆದಿದ್ದ ಹಣ್ಣು,ತರಕಾರಿಗಳಿಗೆ ದೊರೆಯುತ್ತಿದ್ದಷ್ಟು ಬೆಲೆ ಈಗ ದೊರೆಯದೇ ಇರಬಹುದು. ಆದರೆ ಸದ್ಯದ ಸಂಕಷ್ಟದ ಸ್ಥಿತಿಯಲ್ಲಿ ಯಾವುದೇ ತರಕಾರಿ, ಹಣ್ಣು ಹಾಳಾಗದಂತೆ ಬೆಳೆ ಬೆಳೆಯಲು ಮಾಡಲಾಗಿದ್ದ ಖರ್ಚಾದರು ಬರುವಂತೆ ಮಾಡಲಾಗಿದೆ ಎಂದರು.
ಹೂವು ಬೆಳೆಗಾರರ ಕಷ್ಟಗಳ ಬಗ್ಗೆ ಸರ್ಕಾರದ ಗಮನದಲ್ಲಿದೆ. ಹೀಗಾಗಿಯೇ ಹೂವು ಬೆಳೆಯುವ ರೈತರಿಗೆ ಹೆಕ್ಟೇರ್‌ಗೆ ₹25,000 ಪರಿಹಾರ ಘೋಷಣೆ ಮಾಡಲಾಗಿದೆ. ಗುರುವಾರಷ್ಟೇ ರೈತ ಸಂಘಟನೆಗಳ ಮುಖಂಡರೊಂದಿಗೆ ಮುಖ್ಯಮಂತ್ರಿಗಳು ಸಭೆ ನಡೆಸಿ ರೈತರ ನೆರವಿಗೆ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಚರ್ಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನು ಸಾಕಷ್ಟು ನೆರವು ಹೂವು ಬೆಳೆಗಾರರು ಸೇರಿದಂತೆ ಇತರೆ ರೈತರಿಗು ದೊರೆಯಲಿವೆ ಎಂದರು.
ಬೆಂಗಳೂರಿನಲ್ಲಿ ಹೂವು ಮಾರಾಟಕ್ಕೆ ಅಯಕಟ್ಟಿನ ಸ್ಥಳ ಹಾಗೂ ಸುಸಜ್ಜಿತವಾದ ಮಾರುಕಟ್ಟೆ ನಿರ್ಮಾಣಕ್ಕೆ ದೇವನಹಳ್ಳಿ, ಬೆಂಗಳೂರಿನ ಭಿನ್ನಿಪೇಟೆ, ಹೆಬ್ಬಾಳ ಹಾಗೂ ಬ್ಯಾಟರಾಯನಪುರದಲ್ಲಿ ಸ್ಥಳಗಳನ್ನು ಗುರುತಿಸಲಾಗಿದೆ. ಸದ್ಯದಲ್ಲೇ ಕೃಷಿ ಮಾರುಕಟ್ಟೆ ಸಚಿವರು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮಾರುಕಟ್ಟೆ ಸ್ಥಳದ ಬಗ್ಗೆ ನಿರ್ಧರಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಟಿ.ವಿ.ಲಕ್ಷ್ಮೀನಾರಾಯಣ್,ಸಂಘದ ಅಧ್ಯಕ್ಷ ಕೆ.ಎಸ್.ಚನ್ನರಾಮಯ್ಯ, ಕಾರ್ಯದರ್ಶಿ ಶ್ಯಾಮಸುಂದರ್, ಖಜಾಂಚಿ ವೆಂಕಟೇಶ್ ಇದ್ದರು.