ದೊಡ್ಡಬಳ್ಳಾಪುರ: ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ವ್ಯವಸ್ಥಾಪನ ಮಂಡಳಿ ಸದಸ್ಯರಾಗಿ ನೇಮಕವಾಗಿರುವ ತಾಲ್ಲೂಕಿನ ಪ್ರಗತಿಪರ ಕೃಷಿಕ ದೊಡ್ಡತುಮಕೂರು ಗ್ರಾಮದ ಟಿ.ಎಂ.ಅರವಿಂದ್ ಅವರ ಅಭಿನಂದನೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಅಪ್ಪಯ್ಯ, ಗ್ರಾಮೀಣ ಪ್ರದೇಶದ ಜನರನ್ನು ಗುರುತಿಸಿ ಕೃಷಿ ವಿವಿಗಳಲ್ಲಿ ಜವಾಬ್ದಾರಿಗಳನ್ನು ನೀಡುವುದೇ ಅಪರೂಪ. ಇಂತಹ ಸಂದರ್ಭದಲ್ಲಿ ನಮ್ಮ ತಾಲ್ಲೂಕಿನ ಪ್ರಗತಿಪರ ಯುವ ಕೃಷಿಕರನ್ನು ವ್ಯವಸ್ಥಾಪನ ಮಂಡಳಿಗೆ ನೇಮಿಸಿರುವುದು ಹೆಮ್ಮೆಯ ಸಂಗತಿ. ಕೃಷಿ ವಿವಿಗಳಲ್ಲಿನ ನೂತನ ಪ್ರಯೋಗಗಳು ರೈತರ ತೋಟಗಳಲ್ಲಿ ಅನುಷ್ಟಾನಕ್ಕೆ ಬರುವಂತೆ ನೋಡಿಕೊಳ್ಳಬೇಕಾದ ತುರ್ತು ಅಗತ್ಯವಿದೆ. ಅಲ್ಲದೆ ಲಾಕ್‌ಡೌನ್ ರೈತರ ಮುಂದೆ ಹಲವಾರು ರೀತಿಯ ಹೊಸ ಸಮಸ್ಯೆಗಳು ಹಾಗೆಯೇ ಹೊಸ ಅವಕಾಶಗಳನ್ನು ಸಹ ತಂದಿಟ್ಟಿದೆ. ಇವುಗಳನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದನ್ನು ಕೃಷಿ ವಿವಿಯಲ್ಲಿನ ತಜ್ಞರು ರೈತರೊಂದಿಗೆ ಕೂಡಿಕೊಂಡು ಮನವರಿಕೆ ಮಾಡಿಕೊಡಬೇಕಿದೆ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕೃಷಿ ವಿವಿ ವ್ಯವಸ್ಥಾಪನ ಮಂಡಳಿ ಸದಸ್ಯ ಟಿ.ಎಂ.ಅರವಿಂದ್, ಕೃಷಿ ಸೇರಿದಂತೆ ಎಲ್ಲಾ ಉದ್ಯಮ, ಜನರ ಬದುಕು ಸಂಕ್ರಮಣ ಕಾಲಘಟ್ಟದಲ್ಲಿದೆ. ರೈತರ ಮುಂದೆ ಮಾರುಕಟ್ಟೆ ಸಮಸ್ಯೆಯು ಸೇರಿದಂತೆ ತಮ್ಮ ಮುಂದಿನ ಬದುಕು, ಯಾವ ಬೆಳೆ ಪದ್ದತಿಗಳ ಕಡೆಗೆ ಹೋಗಬೇಕು ಎನ್ನುವ ಹತ್ತಾರು ಪ್ರಶ್ನೆಗಳು ಇವೆ. ಇವುಗಳನ್ನು ಸಮರ್ಥವಾಗಿ ಎದುರುಸಿ ಬದುಕು ರೂಪಿಸಿಕೋಳ್ಳುವ ಕಡೆಗೆ ಅನುಕೂಲವಾಗುವಂತೆ ಕೃಷಿ ವಿವಿಗಳು ಶ್ರಮಿಸಲು ಹೆಚ್ಚಿನ ಒತ್ತು ನೀಡಿ ಕೆಲಸ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಮಲ್ಲಿಕಾರ್ಜುನಗೌಡ, ತಾಲ್ಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಚಿಕ್ಕಣ್ಣ,ದಕ್ಷಿಣ ಭಾರತ ಹೂವು ಬೆಳೆಗಾರರ ಸಂಘದ ನಿರ್ದೇಶಕ ಶ್ರೀಕಾಂತ್ ಇದ್ದರು.